Advertisement

ಜ್ಞಾನವೇ ಪರಮೋಚ್ಛ ಸಂಪತ್ತು: ಚಟ್ನಳ್ಳಿ ಮಹೇಶ್‌

03:02 PM Jul 27, 2019 | Naveen |

ಚಿಕ್ಕಮಗಳೂರು: ಜ್ಞಾನವೆಂದರೆ ಕ್ರಿಯೆ, ಕ್ರಿಯೆ ಎಂದರೆ ಜ್ಞಾನ. ಜ್ಞಾನವೆಂದರೆ ತಿಳಿಯುವುದು. ಕ್ರಿಯೆ ಎಂದರೆ ತಿಳಿದಂತೆ ಮಾಡುವುದು. ಅರಿತೂ ಆಚರಿಸದಿರುವುದೇ ಅಜ್ಞಾನ. ಇದು ವಚನ ಸಾಹಿತ್ಯದ ಸಾರ-ಸತ್ವ ಎಂದು ಸಾಹಿತಿ ಚಟ್ನಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.

Advertisement

ನಗರದ ಬಿಜಿಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ‘ಶಿಕ್ಷಣದ ಸಾರ್ಥಕತೆಗೆ ವಚನಕಾರರ ಕೊಡುಗೆ’ ವಿಷಯದ ಕುರಿತು ಮಾತನಾಡಿದರು.

ಗುರುವಿನ ಶಿಕ್ಷಣ ಕಂಠಸ್ಥವಲ್ಲ, ಹೃದಯಸ್ಥ ವಾಗಲೆಂಬ ಸತ್ಯ ಸಂಗತಿ ಸಾರಿದವರು ಶರಣರು. ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡ ಬೇಕೆಂದವರು ಬಸವಣ್ಣನವರು. ಅರಿವೇ ಗುರು, ಆಚಾರವೇ ಶಿಷ್ಯ, ಪರಿಣಾಮವೇ ತಪಸ್ಸು ಎನ್ನುವ ಮೂಲಕ ಸ್ವಾ-ಅನುಭವನಕ್ಕೆ ಒತ್ತು ನೀಡಲಾಗಿತ್ತು. ತಿಳಿವಳಿಕೆಗೆ ಮಹತ್ವದ ಪ್ರಾಮುಖ್ಯತೆಯನ್ನು ಕಲ್ಯಾಣದಲ್ಲಿ ನೀಡಲಾಗಿತ್ತು ಎಂದು ಹೇಳಿದರು.

ಜ್ಞಾನವೇ ಪರಮೋಚ್ಛ ಸಂಪತ್ತು. ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿ ಇದ್ದವನೇ ನಿಜವಾದ ಶ್ರೀಮಂತ. ಜನಪದರಿಗೂ ಶರಣರಿಗೂ ಅನೇಕ ಸಾಮ್ಯಗಳಿವೆ. ಹುಟ್ಟುತ್ತಾ ಮಗು ದೇವರಾಗಿದ್ದರೆ, ಬೆಳೆದಂತೆ ದೆವ್ವವಾಗದೆ ಮಹಾಮಾನವನಾಗಲು ನಮ್ಮ ಶಿಕ್ಷಣ, ಪರಿಸರ, ಸಾಹಿತ್ಯ, ಸಂಸ್ಕೃತಿ ಪೂರಕವಾಗಬೇಕು. ಸಮರ್ಥ, ಸಮೃದ್ಧ, ಪ್ರಾಮಾಣಿಕ ಮತ್ತು ಪರಿಣಾಮಕಾರಿ ಪ್ರಜೆಗಳಾಗಬೇಕೆಂಬ ಆಶಯವಿದೆ ಎಂದರು.

ವಚನಕ್ರಾಂತಿಯಲ್ಲಿ ಧಾರ್ಮಿಕ ಚಿಂತನೆ, ಸಾಮಾಜಿಕ ಕಳಕಳಿ, ಸ್ತ್ರೀಪರ ಕಾಳಜಿ, ರಾಜಕೀಯ ಸುಧಾರಣೆಯ ಅಂಶಗಳಿವೆ. ನೈತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ನೆಲೆಗಳನ್ನು ವಚನಗಳಲ್ಲಿ ಗುರುತಿಸಬಹುದು. ಅಂದಿನ ಸಂದರ್ಭದಲ್ಲಿದ್ದ ಬಹುತೇಕ ಸಮಸ್ಯೆಗಳು ಇಂದೂ ಕಾಡುತ್ತಿದ್ದು, ಇದಕ್ಕೆ ಉತ್ತರ ಕಂಡುಕೊಳ್ಳಲು ಮತ್ತೆ ಕಲ್ಯಾಣ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಎಐಟಿ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯದಂತಹ ಉತ್ಕೃಷ್ಟ ಸಾಹಿತ್ಯ ಜಗತ್ತಿನಲ್ಲಿ ಬೇರೆ ಇಲ್ಲ. ನಮ್ಮ ಸಂವಿಧಾನದ ಸಮಾನತೆ, ಸಹೋದರತೆಯಂತಹ ಆಶಯಗಳನ್ನು ಅಂದೇ ವಚನಕಾರರು ಪ್ರತಿಪಾದಿಸಿದ್ದರು. ಬದುಕು ಹೇಗಿರಬೇಕೆಂದು ತಿಳಿಸಿಕೊಟ್ಟಿದ್ದಾರೆ. ಸಾಮಾಜಿಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ವಚನಗಳು ಪೂರಕ ಎಂದು ಹೇಳಿದರು.

ವಚನ ಸಾಹಿತ್ಯ ಒಂದು ಜಾತಿ-ವರ್ಗಕ್ಕೆ ಸೀಮಿತವಾದ ಜ್ಞಾನವಲ್ಲ. ಅಸ್ಪೃಶ್ಯತೆ, ಜಾತೀಯತೆ, ಕಂದಾಚಾರ, ಮೌಡ್ಯತೆ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸ ಮಾಡಿದೆ. ಕಾಯಕವೇ ಕೈಲಾಸಎಂಬುದು ಅದ್ಭುತ ಚಿಂತನೆ. ಸರಳ-ಸುಂದರ ವಾಗಿ ವಚನಗಳು ಜನರನ್ನು ತಲುಪುತ್ತವೆ ಎಂದರು. ಜಿಪಂ ಸದಸ್ಯ ಬಿ.ಜಿ.ಸೋಮಶೇಖರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ಬಸವಾದಿ ಶಿವಶರಣರ ಸತಾðಂತಿ ಜನಮುಖೀ-ಸಮಾಜಮುಖೀಯಾಗಿತ್ತು. ತಾರತಮ್ಯವಿಲ್ಲದೆ ಭಿನ್ನಬೇಧವಿಲ್ಲದೆ ಎಲ್ಲರೂ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಅಂದೇ ಕಲ್ಪಿಸಲಾಗಿತ್ತು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗ ಶಾಸ್ತ್ರಿ, ನಾಡಿನ ಪ್ರಬುದ್ಧ ಚಿಂತಕ-ರಂಗಕರ್ಮಿ ಸಾಣೇಹಳ್ಳಿ ಶ್ರೀಗಳು ಮತ್ತೆ ಕಲ್ಯಾಣ ಅಭಿಯಾನವನ್ನು ಆಗಸ್ಟ್‌ ತಿಂಗಳ ಪರ್ಯಂತ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಡೆಸಲಿದ್ದಾರೆ. ಕನ್ನಡನಾಡಿನ ಹೆಮ್ಮೆ 12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಇಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಆಶಯವಿದೆ. ಇದಕ್ಕೆ ಪೂರಕವಾಗಿ ಯುವಜನರೊಂದಿಗೆ ವಚನ ಸಾಹಿತ್ಯದ ವಿವಿಧ ಆಯಾಮಗಳನ್ನು ಚಿರ್ಚಿಸುವ, ಚಿಂತಿಸುವ ಸಂವಾದಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಗರಸಭಾ ಮಾಜಿ ಸದಸ್ಯ ಎಚ್.ಡಿ.ತಮ್ಮಯ್ಯ ಮತ್ತು ಯುರೇಕಾ ಅಕಾಡೆಮಿಯ ಪ್ರಾಂಶುಪಾಲ ದೀಪಕ ದೊಡ್ಡಯ್ಯ ಸತ್ಯ, ಸ್ಪಷ್ಟವಾದ ಶರಣರ ಚಿಂತನೆಗಳ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಬಿ.ಜಿ.ಸುರೇಂದ್ರ ಮುಖ್ಯ ಅತಿಥಿಗಳಾಗಿದ್ದರು. ಉಪನ್ಯಾಸಕರಾದ ಸಂತೋಷ ಸ್ವಾಗತಿಸಿ, ಪುಟ್ಟಸ್ವಾಮಿ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next