ಚಿಕ್ಕಮಗಳೂರು: ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪದೇ ಪದೆ ಗುಡ್ಡ ಕುಸಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಮಾಡಿಘಾಟಿ ರಸ್ತೆಯ ಸುತ್ತಮುತ್ತ ಎಡಬಿಡದೆ ಮಳೆಯಾಗುತ್ತಿದ್ದು, ಘಾಟಿ ರಸ್ತೆಯ ಅನೇಕ ಕಡೆ ಗುಡ್ಡ ಕುಸಿತವಾಗಿದೆ ಹಾಗೂ ಅನೇಕ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿಯಂತೆ ಆ.7 ಮತ್ತು 8 ರಂದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದರು.
ಮಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಶಿರಾಡಿ ಘಾಟಿ ಮತ್ತು ಎಸ್.ಕೆ.ಬಾರ್ಡರ್ ರಸ್ತೆ ಮೂಲಕ ಸಂಚಾರ ಮಾಡಬಹುದಾಗಿದೆ. ಮಂಗಳವಾರ ರಾತ್ರಿ ಚಾರ್ಮಾಡಿಘಾಟಿಯ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣು ಮತ್ತು ಮರಗಳ ತೆರವು ಕಾರ್ಯಾಚರಣೆ ಮಂಗಳವಾರ ರಾತ್ರಿಯಿಂದಲೇ ನಡೆಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಚಾರ್ಮಾಡಿ ಘಾಟಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಲೆನಾಡು ಭಾಗದಲ್ಲಿ ಕಳೆದ ಆರು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದ್ದು, ರಸ್ತೆ ಮತ್ತು ಜಮೀನುಗಳಿಗೆ ಹಾನಿಯಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರೊಂದಿಗೆ ಮಂಗಳವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಮಂಗಳವಾರ ಜಯಪುರ ಹಾಗೂ ಚಿಕ್ಕಮಗಳೂರು ಸಂಪರ್ಕಿಸುವ ರಸ್ತೆ 100 ಮೀ. ಭೂ ಕುಸಿತವಾಗಿದೆ. ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಜಯಪುರ ಹಾಗೂ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ 7ರಿಂದ 8 ಕಡೆಗಳಲ್ಲಿ ಬಂಡೆ ಹಾಗೂ ಗುಡ್ಡದ ಮಣ್ಣು ಕುಸಿದಿದೆ. ಬಂಡೆ ಹಾಗೂ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಮಂಗಳವಾರ ಶೃಂಗೇರಿಯ ತುಂಗಾ ನದಿ ಸಮೀಪದ ರಸ್ತೆ ನೀರಿನಲ್ಲಿ ಮುಳುಗಿದೆ. ಕಪ್ಪೆ ಶಂಕರ ಮಂಟಪ ಮುಳುಗಿದೆ. ಹೊರನಾಡು ಕಳಸಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮುಳುಗಿದೆ. ಚಾರ್ಮಾಡಿಘಾಟಿಯಲ್ಲಿ ಮಂಗಳವಾರ ರಾತ್ರಿ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ ಮತ್ತು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಮಂಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತುಕತೆ ನಡೆಸಿ ರಸ್ತೆ ತೆರವು ಕಾರ್ಯಚರಣೆ ನಡೆಸಿದ್ದಾರೆ. ಮಳೆ ಮುಂದೂವರಿದರೆ ಅನೇಕ ಕಡೆಗಳಲ್ಲಿ ಗುಡ್ಡ ಕುಸಿಯುವ ಸಂಭವ ಇರುವುದರಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ ಎಂದು ತಿಳಿಸಿದರು. ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ 45 ಕಡೆಗಳಲ್ಲಿ 76ಪುನರ್ ವಸತಿ ಕೇಂದ್ರಗಳನ್ನು ತೆರೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಮಂಗಳವಾರ ಕಲ್ಲತ್ತಗಿರಿ ವೀರಭದ್ರೇಶ್ವರ ದೇವಾಲಯದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮದ ಹೇಮಾವತಿ ನದಿ ಪಾತ್ರದ ಬಳಿ ನಡು ನೀರಿನಲ್ಲಿ ಸಂಕಷ್ಟದಲ್ಲಿದ್ದ 9 ಜನರು ಹಾಗೂ ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.