Advertisement

ಕಾಟಾಚಾರದ ಶಿಕ್ಷಕ ವೃತ್ತಿ ಬೇಡ: ಕೆ.ಪ್ರಸಾದ್‌

12:27 PM May 31, 2019 | Naveen |

ಚಿಕ್ಕಮಗಳೂರು: ಶಿಕ್ಷಕ ವೃತ್ತಿ ಕಾಟಾಚಾರಕ್ಕೆ ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಅವರ ಭವಿಷ್ಯ ರೂಪಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ| ಕೆ.ಪ್ರಸಾದ್‌ ಕಿವಿಮಾತು ಹೇಳಿದರು.

Advertisement

ಎಂ.ಎಲ್.ಮಂಜಯ್ಯಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕೌಶಲ್ಯ ವಿಕಾಸ ಮತ್ತು ವೃತ್ತಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಈ ನಾಲ್ಕು ಕಾಲೇಜುಗಳ ಬಿಇಡಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಹಿಂದೆ ಸರ್ಕಾರ 6 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ ಅದು ಸಫಲವಾಗಲಿಲ್ಲ. ಈಗ ಪರ್ಯಾಯವಾಗಿ ಖಾಸಗಿ ಎನ್‌ಜಿಒ ಸಂಸ್ಥೆಯೊಂದು ಉಚಿತವಾಗಿ ತರಬೇತಿ ನೀಡಲು ಮುಂದೆ ಬಂದಿದ್ದು, ಇದರ ಸದುಪಯೋಗವನ್ನು ಪ್ರಶಿಕ್ಷಣಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಭವಿಷ್ಯ ಯಾವ ರೀತಿ ರೂಪಿಸಬೇಕು ಎಂಬ ಕನಸು ನಿಮ್ಮ ಮುಂದಿದೆ. ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ನೀವಾಗಬೇಕು. ನಿಮ್ಮ ಕನಸು ನನಸಾಗಿಸಲು ಇಲ್ಲಿ ಮುಕ್ತ ಅವಕಾಶವಿದೆ. ವಿದ್ಯಾರ್ಥಿಗಳ ಜೀವನ ಚಿನ್ನದ ಜೀವನ ಎನ್ನುತ್ತಾರೆ. ಆದರೆ ಶಿಕ್ಷಕರ ಜೀವನ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು ಎನ್ನಬಹುದು. ಏಕೆಂದರೆ ಜೀವನದ ಕೊನೆಯವರೆಗೂ ವಿದ್ಯಾರ್ಥಿಗಳೊಂದಿಗೆ ನೀವಿರುತ್ತೀರಿ. ಹೊಸ ಹೊಸ ವಿಷಯ ಕಲಿಯುತ್ತೀರಿ. ಹಾಗಾಗಿ ಕಾಟಾಚಾರದ ವೃತ್ತಿ ಬೇಡ, ಉತ್ತಮ ತರಬೇತಿ ಪಡೆದು ಉತ್ತಮ ಶಿಕ್ಷಕರಾಗಬೇಕೆಂದು ಸಲಹೆ ನೀಡಿದರು.

ಸಮಾಜದಲ್ಲಿ ಒಬ್ಬ ಚಿತ್ರನಟನನ್ನು ಜನ ಬೇಗ ಗುರುತಿಸುತ್ತಾರೆ. ಅವರು ರೀಲ್ ಹೀರೋಗಳು. ಆದರೆ ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ನಿಜಜೀವನದ ಹೀರೋಗಳು. ಸಮಾಜದಲ್ಲಿ ಮೌಲ್ಯಗಳನ್ನು ಕಾಪಾಡಿ ಕೇವಲ ಎಂಎಸ್ಸಿ, ಎಂಕಾಂನಲ್ಲಿ ರ್‍ಯಾಂಕ್‌ ಬಂದರೆ ಸಾಲದು, ತರಬೇತಿ ಇಲ್ಲದಿದ್ದರೆ ಉತ್ತಮ ಶಿಕ್ಷಕ ಎನಿಸಿಕೊಳ್ಳಲಾಗದು ಎಂದರು.

Advertisement

ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡು ರಾಜ್ಯದಲ್ಲಿ ಇಂಗ್ಲಿಷ್‌ ಪಬ್ಲಿಕ್‌ ಶಾಲೆಗಳನ್ನು ತೆರೆಯಲು ಉದ್ದೇಶಿಸಿದ್ದು, ಈಗಾಗಲೇ ದಾಖಲಾತಿ ಆರಂಭವಾಗಿದ್ದು, 70 ಸೀಟು ತುಂಬಬೇಕಾದ ಶಾಲೆಗಳಲ್ಲಿ 100 ಜನ ಅರ್ಜಿ ಹಾಕಿದ್ದಾರೆ. ಇದರಿಂದ ಮುಚ್ಚಿದ್ದ ಸರ್ಕಾರಿ ಶಾಲೆ ಮತ್ತೆ ತೆರೆಯುವಂತಾಗಿದೆ. ಶಿಕ್ಷಕರಾದ ನಿಮಗೆ ಇಂತಹ ಶಾಲೆಗಳಲ್ಲಿ ಪಾಠ ಮಾಡುವ ಸವಾಲು ಎದುರಿಸಬೇಕಿದೆ. ಬೋಧನೆ ಎಂಬುದು ಏಕಮುಖ ಪ್ರಕ್ರಿಯೆಯಾಗಬಾರದು. ನಾನಾ ಚಟುವಟಿಕೆಗಳ ಮಿಳಿತದಿಂದ ಉತ್ತಮ ಶಿಕ್ಷಕನಾಗಿ ಹೊರಹೊಮ್ಮಬಹುದು. ಒಂದೊಂದು ಹಳ್ಳಿಗಳಲ್ಲಿ ನಾಲ್ಕೈದು ಜನ ಬಿಇಡಿ ಪಾಸ್‌ ಆದವರು ಸಿಗುತ್ತಾರೆ. ಆ ಹಳ್ಳಿಯ ಶಾಲೆಯನ್ನು ಅವರಿಗೆ ಒಪ್ಪಿಸಿ ಅಭಿವೃದ್ಧಿ ಪಡಿಸುವಂತಹ ಕಾನೂನನ್ನು ರಾಜ್ಯ ಸರ್ಕಾರ ತಂದರೆ ಯಶಸ್ವಿ ಕಾಣಬಹುದು ಎಂದರು.

ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ|ಡಿ.ಎಲ್.ವಿಜಯಕುಮಾರ್‌ ಮಾತನಾಡಿ, ಶಿಕ್ಷಕರು ತಮ್ಮ ಭವಿಷ್ಯ ವೃದ್ಧಿ ಹಾಗೂ ಆತ್ಮವಿಶ್ವಾಸಗಳಿಸಿಕೊಳ್ಳಲು ಕೌಶಲ್ಯ ತರಬೇತಿ ಸಹಕಾರಿಯಾಗಲಿ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಶಾಂತಕುಮಾರಿ ಮಾತನಾಡಿ, ಡಾ| ರಾಜ್‌ ಫೌಂಡೇಷನ್‌ ಆರಂಭಿಸಿರುವ ಉನ್ನತ ಶಿಕ್ಷಣ ತರಬೇತಿಗೆ ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿಜಯಲಕ್ಷ್ಮಿ ದೇಸಾಯಿ ಮಾತನಾಡಿ, ಶಿಕ್ಷಕರ ವೃತ್ತಿಗೆ ಕೌಶಲ್ಯ ಆಧಾರಿತ ತರಬೇತಿ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಬೋಧಕರಾದ ಪಿ.ಯು.ಆಕಾಶ್‌ ಮಾತನಾಡಿದರು. ಎಚ್.ಎಂ.ವನಿತಾ ಸ್ವಾಗತಿಸಿದರು. ಕೀರ್ತಿ ನಿರೂಪಿಸಿದರು. ಸುಷ್ಮಾ ವಂದಿಸಿದರು.

ಸಮಾಜದಲ್ಲಿ ಒಬ್ಬ ಚಿತ್ರನಟನನ್ನು ಜನ ಬೇಗ ಗುರುತಿಸುತ್ತಾರೆ. ಅವರು ರೀಲ್ ಹೀರೋಗಳು. ಆದರೆ ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ನಿಜಜೀವನದ ಹೀರೋಗಳು. ಸಮಾಜದಲ್ಲಿ ಮೌಲ್ಯಗಳನ್ನು ಕಾಪಾಡಿ ಕೇವಲ ಎಂಎಸ್ಸಿ, ಎಂಕಾಂನಲ್ಲಿ ರ್‍ಯಾಂಕ್‌ ಬಂದರೆ ಸಾಲದು, ತರಬೇತಿ ಇಲ್ಲದಿದ್ದರೆ ಉತ್ತಮ ಶಿಕ್ಷಕ ಎನಿಸಿಕೊಳ್ಳಲಾಗದು.
•ಪ್ರೊ| ಕೆ.ಪ್ರಸಾದ್‌,
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next