Advertisement

ನೆರೆ ಸಂತ್ರಸ್ತರಿಗೆ ಆಸರೆಯಾಗಲು ಆದ್ಯತೆ

11:55 AM Aug 21, 2019 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಮನೆ, ಕೃಷಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವುದು ತಮ್ಮ ಮೊದಲ ಆದ್ಯತೆ ಎಂದು ಮಂಗಳವಾರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಟಿ. ರವಿ ತಿಳಿಸಿದರು.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೇವಲ 8 ದಿನಗಳ ನಿರಂತರ ಮಳೆ ಮಲೆನಾಡು ತಾಲೂಕುಗಳಲ್ಲಿ, ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲಿ ಆಗಾಧ ಪ್ರಮಾಣದಲ್ಲಿ ಹಾನಿಯುಂಟು ಮಾಡಿ, 1970 ಮಂದಿ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ಮೊದಲು ಪರಿತಪಿಸುತ್ತಿರುವ ಸಂತ್ರಸ್ತರ ಬದುಕಿಗೆ ಸರ್ಕಾರ ಆಸರೆಯಾಗಿ ನಿಂತು ಅವರನ್ನು ಈ ಪರಿಸ್ಥಿತಿಯಿಂದ ಮೇಲೆತ್ತಿ ಅವರ ಬದುಕನ್ನು ಹಳಿಯ ಮೇಲೆ ಕೂರಿಸಬೇಕಾಗಿದೆ ಎಂದು ಹೇಳಿದರು.

ಪಶ್ಚಿಮ ಘಟ್ಟದಲ್ಲಿರುವ ಮಲೆನಾಡಿಗೆ ಮಳೆ ಹೊಸತಲ್ಲ. ಹಿಂದೆ ಹಲವು ಬಾರಿ ಕುಂಭದ್ರೋಣ ಮಳೆಯನ್ನು ಈ ಪ್ರದೇಶಗಳು ಕಂಡಿವೆ. ಆಗ ಸಂಭವಿಸದ ಭೂಕುಸಿತ ಈಗ ಕೇವಲ ಎಂಟು ದಿನಗಳ ಮಳೆಗೆ ಕಂಡುಬಂದಿದೆ. ಇದಕ್ಕೆ ಕಾರಣವನ್ನು ಕಂಡುಕೊಂಡು ಮುಂದೆ ಈ ರೀತಿಯ ಪ್ರಕೃತಿ ವಿಕೋಪ ಜನರ ಬದುಕನ್ನು ಅಸ್ತವ್ಯಸ್ತಗೊಳಿಸದಂತೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲು ಯೋಚಿಸಬೇಕಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ಕಡೂರು ಆಗಾಗ ಬರಕ್ಕೆ ತುತ್ತಾಗುವ ತಾಲೂಕು. ಇದೇ ರೀತಿ, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲೂ ಬಯಲು ಪ್ರದೇಶವಿದೆ. ಇಲ್ಲಿ ಇರುವ ಗ್ರಾಮಗಳಿಗೆ ಸಮಸ್ಯೆ ಎಂದರೆ ಕುಡಿಯುವ ನೀರು. ಖಾಯಂ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಲಧಾರೆ ಯೋಜನೆಯನ್ನು ಬಳಸಿಕೊಂಡು ನಿರಂತರ ನೀರು ಹರಿಸಲು ಗಮನ ನೀಡುವುದಾಗಿ ತಿಳಿಸಿದರು.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಈ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿತ್ತು. ಅದಕ್ಕೆ ಪೂರ್ವಭಾವಿಯಾಗಿ ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯನ್ನು ಉನ್ನತೀಕರಿಸಬೇಕಾಗಿದೆ. ಜೊತೆಗೆ ಹೈಟೆಕ್‌ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಸಾಮಾನ್ಯರಿಗೂ ಅತ್ಯಾಧುನಿಕ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಉನ್ನತೀಕರಣದ ಕಾಮಗಾರಿಯನ್ನು ಅದಷ್ಟು ಬೇಗ ಕೈಗೊಳ್ಳಲು ಮುಂದಾಗುವುದಾಗಿ ಹೇಳಿದರು.

Advertisement

ಬೆಟ್ಟ-ಗುಡ್ಡಗಳ ಜಿಲ್ಲೆಯಲ್ಲಿ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಪ್ರವಾಸೋದ್ಯಮದ ಬೆಳವಣಿಗೆ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಪ್ರವಾಸೋದ್ಯಮ ನೀತಿಯನ್ನು ರೂಪಿಸಬೇಕು. ಮಲೆನಾಡು ತಾಲೂಕುಗಳ ಸೂಕ್ಷ್ಮ ಪರಿಸರದ ಹಿನ್ನೆಲೆಯಲ್ಲಿ ಆಲೋಚಿಸಿ ನೀತಿ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಿಸಿದರು. ಹಿಂದಿನ ಸರ್ಕಾರ ಇನಾಂ ದತ್ತಾತ್ರೇಯ ಪೀಠದ ವಿವಾದವನ್ನು ಪರಿಹರಿಸುವ ಬದಲು ಕಗ್ಗಂಟಾಗಿಸಿದೆ. ಅದನ್ನು ನ್ಯಾಯುತವಾಗಿ ಹಾಗೂ ಸೌಹಾರ್ದಯುತವಾಗಿ ಪರಿಹರಿಸುವ ಆಲೋಚನೆ ಮಾಡಲಾಗುವುದೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next