ಚಿಕ್ಕಮಗಳೂರು : ಕಾಡಾನೆ ಕಾಲ್ತುಳಿತಕ್ಕೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೆ. 3 ಭಾನುವಾರ ಇಲ್ಲಿನ ಅರೆನೂರು ಗ್ರಾಮದಲ್ಲಿ ಅರೆನೂರು-ಕಂಚುಕಲ್ ದುರ್ಗಾ ರಸ್ತೆಯಲ್ಲಿ ನಡೆದಿದೆ.
ದುರ್ಗಾ ಕಿನ್ನಿ (60) ಕಾಡಾನೆ ಕಾಲ್ತುಳಿತಕ್ಕೆ ಮೃತಪಟ್ಟ ವ್ಯಕ್ತಿ.
ಹಳ್ಳಿಯ ಕಾಲು ದಾರಿಯಲ್ಲಿ ನಡೆದು ಹೋಗುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಆಲ್ದೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳಕ್ಕೆ ಹಿರಿಯ ಅರಣ್ಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ. ಸ್ಥಳಿಯರು ಸ್ಥಳಕ್ಕೆ ಭೇಟಿ ನೀಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಆನೆ ಕಾರ್ಯಪಡೆ ಸ್ಥಾಪನೆಗೊಂಡ ಬಳಿಕ ಕಾಡಾನೆಗಳು ಕಾಫಿ ತೋಟ ದಾಳಿ ಇಟ್ಟು ಬೆಳೆ ನಾಶ ಮಾಡಿರುವ ಘಟನೆಗಳು ನಡೆದಿದ್ದವು. ಆನೆ ಕಾರ್ಯಪಡೆ ಮನುಷ್ಯ ಮತ್ತು ಪ್ರಾಣಿ ಸಂಘರ್ಷಕ್ಕೆ ತಡೆ ಒಡ್ಡಿತ್ತು. ಈ ನಡುವೆ ಭಾನುವಾರ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿರುವುದು ಮಲೆನಾಡಿಗಳಲ್ಲಿ ಮತ್ತೆ ಕಾಡಾನೆ ಭೀತಿ ಮೂಡಿಸಿದೆ. ಕಾಫಿನಾಡ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ದಾಳಿ. ಮೂಡಿಗೆರೆಯಲ್ಲಿ 2 ವರ್ಷದಲ್ಲಿ 6ಕ್ಕೂ ಹೆಚ್ಚು ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ.