ಚಿಕ್ಕಮಗಳೂರು: ಗಾಂಜಾ ಗಲಾಟೆಯ ಹಳೇ ವೈಷಮ್ಯದ ಹಿನ್ನೆಲೆ ಕ್ರಿಕೆಟ್ ಆಡುವಾಗ ಕಿರಿಕ್ ಮಾಡಿಕೊಂಡ ಒಂದು ಗುಂಪಿನ ಯುವಕರು ಮತ್ತೊಂದು ಗುಂಪಿನ ಯುವಕನ ಮೇಲೆ ಮನಸ್ಸೋ ಇಚ್ಛೆ ಚಾಕು ಇರಿದಿರುವ ಘಟನೆ ಸೆ.4ರ ಸೋಮವಾರ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಏರಿಯಾದಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಯುವಕ ಇಬ್ರಾಹಿಂ ಎಂದು ತಿಳಿದು ಬಂದಿದೆ.
ಯುವಕರ ತಂಡದ ತೀವ್ರ ದಾಳಿಯಿಂದ ಯುವಕ ಇಬ್ರಾಹಿಂ ಅಸ್ವಸ್ಥನಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಿದ್ದಾರೆ.
ಚಿಕ್ಕಮಗಳೂರು ನಗರದ ಗೌರಿಕಾಲುವೆಯಲ್ಲಿ ಕ್ರಿಕೆಟ್ ಆಡುವಾಗ ಇಬ್ರಾಹಿಂ ಹಾಗೂ ಮತ್ತೊಂದು ಗುಂಪಿನ ನಡುವೆ ಕ್ರಿಕೆಟ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.
ಈ ಜಗಳ ವಿಕೋಪಕ್ಕೆ ತಿರುಗಿ ಇಬ್ರಾಹಿಂ ಮೇಲೆ ಮತ್ತೊಂದು ತಂಡ ಚಾಕುವಿನಿಂದ ಹಲ್ಲೆ ಮಾಡಿದೆ. ಇಬ್ರಾಹಿಂ ಎದೆ ಭಾಗಕ್ಕೆ ತೀವ್ರವಾಗಿ ಚಾಕುವಿನಿಂದ ಇರಿದ ಪರಿಣಾಮ ಇಬ್ರಾಹಿಂ ದೇಹದೊಳಗಿನ ಅಂಗ ಹೊರಬರುವಂತೆ ಚುಚ್ಚಿದ್ದಾರೆ. ಇಬ್ರಾಹಿಂ ಮೇಲೆ ಚಾಕುವಿನಿಂದ ತೀವ್ರ ಹಲ್ಲೆ ಮಾಡಿದ ಎದುರಾಳಿಗಳು ಆತನ ಗೌರಿಕಾಲುವೆ ಗ್ರಾಮದ ರಾಜಕಾಲುವೆಯಲ್ಲಿ ಎಸೆದು ಹೋಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ರಾಹಿಂ ಕಾಲುವೆಯಿಂದ ಮೇಲೆ ಬರಲು ಹೋರಾಡುತ್ತಿದ್ದನು. ಕೂಡಲೇ ಆತನನ್ನು ನೋಡಿದ ಸ್ಥಳೀಯರು ಕಾಲುವೆಯಿಂದ ಮೇಲೆತ್ತಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.