Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

03:01 PM Oct 04, 2019 | Naveen |

„ಎಸ್‌.ಕೆ.ಲಕ್ಷ್ಮೀ ಪ್ರಸಾದ್‌
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪ್ರಮುಖವಾಗಿ 3 ಮಂದಿ ಹೆಸರು ಮುಂಚೂಣಿಗೆ ಬಂದು ನಿಂತಿವೆ.

Advertisement

ಈವರೆಗೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಕಾರ್ಯನಿರ್ವಹಿಸುತ್ತಿದ್ದು, ಈಗ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷ ಕ್ರಮ ಕೈಗೊಂಡಿದೆ. ಪಕ್ಷದ ಸಾಂಸ್ಥಿಕ ಚುನಾವಣೆಗಳು ಆರಂಭವಾಗಿದ್ದು, ಜಿಲ್ಲೆಯ 9ಮಂಡಲಗಳ ಅಧ್ಯಕ್ಷರ ಆಯ್ಕೆಯಾದ ತಕ್ಷಣ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವಾರು ಹೆಸರುಗಳು ಕೇಳಿಬರುತ್ತಿದ್ದರೂ ಹಿಂದೆ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದ ಕಲ್ಮರುಡಪ್ಪ, ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿರುವ ಸಿ.ಆರ್‌.ಪ್ರೇಮ್‌ಕುಮಾರ್‌ ಮತ್ತು ಶೆಟ್ಟಿಗದ್ದೆ ರಾಮಸ್ವಾಮಿ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಮೂವರು ಸಹ ಪಕ್ಷದ ಹಿರಿಯ ಕಾರ್ಯಕರ್ತರು ಹಾಗೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪಕ್ಷದ ಬಗ್ಗೆ ಹೊಂದಿರುವ ನಿಷ್ಠೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ, ಪಕ್ಷವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಸಬಲವಾಗಿ ಬೆಳೆಸುವ ಹಾಗೆ ಜಿಲ್ಲಾದ್ಯಂತ ಓಡಾಡುವವರು ಈ ಮೂವರಲ್ಲಿ ಯಾರು ಎಂಬುದನ್ನಷ್ಟೆ ಪಕ್ಷದ ವರಿಷ್ಠರು ಆಲೋಚಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷ ಈಗಾಗಲೇ ಲೋಕಸಭಾ ಕ್ಷೇತ್ರ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳಲ್ಲಿ 4ನ್ನು ಗೆದ್ದುಕೊಂಡಿದೆ. ರಾಜ್ಯದಲ್ಲಿ ಆಡಳಿತ ಪಕ್ಷವಾಗೂ ಇದೆ. ಜಿಲ್ಲೆಯ ಹಲವು ತಾಲೂಕು ಪಂಚಾಯತ್‌ಗಳು ಮತ್ತು ಜಿಲ್ಲಾ ಪಂಚಾಯತ್‌ ಸಹ ಪಕ್ಷದ
ಹಿಡಿತದಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಹಿಂಜರಿಕೆ ಪಕ್ಷಕ್ಕೆ ಆಗದಂತೆ ಅದನ್ನು ಮತ್ತಷ್ಟು ಸದೃಢವಾಗಿ ಬೆಳೆಸುವವರನ್ನು ಅಧ್ಯಕ್ಷರನ್ನಾಗಿಸಬೇಕು ಎಂಬುದು ವರಿಷ್ಠರ ಸೂಚನೆ ಎಂದು ಕೇಳಿಬರುತ್ತಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಸಿ.ಆರ್‌.ಪ್ರೇಮ್‌ ಕುಮಾರ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿದ್ಯಾರ್ಥಿ ಪರಿಷತ್‌ ಮೂಲಕ ರಾಜಕೀಯ ಕ್ಷೇತ್ರಕ್ಕೆ ಅಡಿಯಿಟ್ಟು ಅಲ್ಲೂ ಸಹ ಹಲವು ಜವಾಬ್ದಾರಿಗಳನ್ನು ಹೊತ್ತು, ನಗರಸಭಾ ಸದಸ್ಯರಾಗಿ ನಂತರ ಅಧ್ಯಕ್ಷರೂ ಆಗಿದ್ದು, ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.

Advertisement

ಕಲ್ಮರುಡಪ್ಪ ಜಿಪಂ ಸದಸ್ಯರಾಗಿ ಹಾಗೂ ಒಂದೂಕಾಲು ವರ್ಷ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶಾಸನಸಭಾ ಚುನಾವಣೆಯಲ್ಲಿ ಸಖರಾಯಪಟ್ಟಣ ಹಾಗೂ ಸುತ್ತಲ ಪ್ರದೇಶದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಉತ್ಸಾಹದಿಂದ ಓಡಾಡಿದವರು. ಈಗ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.

ಶೆಟ್ಟಿಗದ್ದೆ ರಾಮಸ್ವಾಮಿ ಶಾಸಕರಾಗಿದ್ದ ಡಿ.ಎನ್‌. ಜೀವರಾಜ್‌ ಅವರ ಚುನಾವಣೆಯಲ್ಲಿ ಹೆಚ್ಚಿನ ಕೆಲಸ ಮಾಡಿದ್ದವರು ಹಾಗೂ ಪಕ್ಷದ ಬೆಳವಣಿಗೆಗೆ ಆ ಭಾಗದಲ್ಲಿ ಹೆಗಲು ಕೊಟ್ಟವರು. ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ಆಯ್ಕೆಯಾಗಿ, ನಂತರ ಅದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.

ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆ ಪಕ್ಷದಲ್ಲೂ ಅನೌಪಚಾರಿಕವಾಗಿ ಚರ್ಚೆಗಳು ನಡೆಯುತ್ತಿವೆ. ಮಲೆನಾಡು ಭಾಗಕ್ಕೆ ನೀಡುವುದಾದರೆ ರಾಮಸ್ವಾಮಿ ಆಯ್ಕೆಗೆ ಪಕ್ಷ ಮುಂದಾಗಬೇಕು. ಬಯಲು ಮತ್ತು ಮಲೆನಾಡಿನ ಎರಡೂ ಕಡೆಗೆ ಸೇರಿದಂತಿರುವ ಭಾಗದಿಂದ ಅಧ್ಯಕ್ಷರನ್ನು ಆಯ್ಕೆ ಮಾಡುವುದಾದರೆ ಪ್ರೇಮ್‌ ಕುಮಾರ್‌ ಹೆಸರು ಮುಂದೆ ಬರುತ್ತದೆ.

ಬಯಲು ಸೀಮೆಗೆ ಪ್ರಾತಿನಿಧ್ಯ ನೀಡುವುದಾದಲ್ಲಿ ಹಿಂದೊಮ್ಮೆ ಅಲ್ಪಕಾಲ ಅಧ್ಯಕ್ಷರಾಗಿದ್ದ ಕಲ್ಮರುಡಪ್ಪ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಲು ಪಕ್ಷದ ಮುಖಂಡರು ಮುಂದಾಗಬಹುದೆಂದು ಹೇಳಲಾಗುತ್ತಿದೆ. ಪಕ್ಷದ ಒಳಹೊಕ್ಕು ಕೆಲವು ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರನ್ನು ಕೆದುಕಿದರೆ ಅವರು ಹೇಳುವುದು ಕೋರ್‌ ಸಮಿತಿ ಸಭೆ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಹೆಚ್ಚಿನ ಬೆಲೆ ಸಿಗುವ ಸಂಭವವಿದೆ ಎಂದು ಅವರ ಆಪ್ತ ವಲಯದಲ್ಲಿ ಈ ಬಗ್ಗೆ ಚರ್ಚಿಸಿದರೆ ಸುಲಭವಾಗಿ ಯಾವ ಹೆಸರು ಹೊರಬರದಿದ್ದರೂ ಸ್ವಲ್ಪಕಾಲ ಮಾತ್ರ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕಲ್ಮರುಡಪ್ಪ ಅವರ ಆಯ್ಕೆಗೆ ಆದ್ಯತೆ ಇದೆ ಎಂಬುದು ನಿಧಾನವಾಗಿ ಕೇಳಿಬಂತು.

ಪಕ್ಷವನ್ನು ಈಗ ಇನ್ನಷ್ಟು ಸದೃಢಗೊಳಿಸುವ ಹಾಗೂ ಕೆಲವು ಕಡೆ ಶಾಸಕರು ಮತ್ತು ಪಕ್ಷದ ಕೆಲವು ಪ್ರಮುಖರ ನಡುವೆ ಇರುವ ಸ್ವಲ್ಪಮಟ್ಟಿನ ಅಸಮಾಧಾನಗಳನ್ನು ತೆಗೆದು ಮತ್ತೆ ಒಟ್ಟಾಗಿ ಹೆಜ್ಜೆ ಹಾಕುವಂತೆ ಮಾಡುವ ಕೆಲಸ ಅಧ್ಯಕ್ಷರದ್ದಾಗಿರಬೇಕು. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ, ಸಾಮರ್ಥ್ಯ ಇರುವವರು ಅಧ್ಯಕ್ಷರಾದರೆ ಒಳ್ಳೆಯದು. ಈ ಮೂವರಲ್ಲೂ ಆ ಗುಣವಿದೆ. ಅವರಲ್ಲೆ ಇನ್ನಷ್ಟು ಸಮರ್ಥರು ಯಾರೆಂದು ಗುರುತಿಸಬೇಕಾಗಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next