Advertisement

17ರಂದು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೃಹತ್‌ ಸಭೆ

07:14 PM Jan 15, 2020 | Naveen |

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಜ.17 ರಂದು ನಗರದಲ್ಲಿ ರಾಷ್ಟ್ರ ಜಾಗರಣಾ ಸಮಿತಿ ವತಿಯಿಂದ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಹಾಗೂ ಜಿ.ಪಂ. ಸದಸ್ಯ ರವೀಂದ್ರ ಬೆಳವಾಡಿ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮರ್ಥ ಭಾರತ ಮತ್ತು ರಾಷ್ಟ್ರ ಜಾಗರಣಾ ಸಮತಿಗಳು ಈ ಜಾಗೃತಿ ಸಭೆಯ ನೇತೃತ್ವ ವಹಿಸಲಿವೆ
ಎಂದರು.

ಅಂದು ಬೆಳಗ್ಗೆ 11ಕ್ಕೆ ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ಸಮಾವೇಶ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ತಾ.ಪಂ., ಜಿ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಮಾನ ಮನಸ್ಕ ಎಲ್ಲ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತರು, ಸ್ವಯಂಸೇವಕರೂ ಆದ ಕಾರ್ಕಳದ ಆದರ್ಶ ಗೋಖಲೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೌರತ್ವ ಕಾಯಿದೆ ಪರ ಭಾರತ ಏಕೆ ನಿಲ್ಲಬೇಕು ಎನ್ನುವ ವಿಚಾರಗಳನ್ನು ಅವರು ತಿಳಿಸಿಕೊಡಲಿದ್ದಾರೆ ಎಂದರು.

ಮಸೂದೆ ಕುರಿತಂತೆ ಕೆಲವು ಕಲುಷಿತ ಮನಸ್ಸುಗಳು, ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಅವರಿಗೆ ಸತ್ಯ ಏನೆಂಬುದನ್ನು ತಿಳಿಸುವ ಹಾಗೂ ಈ ಮಸೂದೆಯ ಮಹತ್ವ ಭಾರತಕ್ಕೆ ಎಷ್ಟಿದೆ ಎನ್ನುವುದರ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

Advertisement

ಕಾರ್ಯಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು,
ಸ್ವಸಹಾಯ ಸಂಘಗಳು ಹಾಗೂ ಅಖೀಲ ಭಾರತ ಅಧಿವಕ್ತ ಪರಿಷದ್‌ ಸಹಕಾರಿಯಾಗಿ ನಿಂತಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಧಿವಕ್ತ ಪರಿಷದ್‌ನ ಬಿ.ಭಕ್ತ ಕುಮಾರ್‌, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅನಿಲ್‌ ಕುಮಾರ್‌, ವಿಶ್ವಹಿಂದೂ ಪರಿಷತ್‌ನ ಯೋಗೀಶ್‌ ರಾಜ್‌ ಅರಸ್‌, ಎಬಿವಿಪಿಯ ಶಶಾಂಕ್‌, ಜಿ.ಪಂ.ಸದಸ್ಯೆ ಜಸಿಂತ ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು.

ಜನಜಾಗೃತಿ ಕಾರ್ಯಕ್ರಮ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆದಿವೆ. 1971ರಲ್ಲೇ ಅಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇದನ್ನು ಜಾರಿಗೆ ತರುವ ಚಿಂತನೆ ನಡೆದಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಹ ಇದರ ಪರವಾಗಿದ್ದರು. ವಲಸಿಗರಿಂದ ಆಂತರಿಕ ತಿಕ್ಕಾಟಕ್ಕೆ ಅವಕಾಶವಾಗಬಾರದು ಎಂದಿದ್ದರು. ಈಗ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಸಾಕಷ್ಟು ಚರ್ಚೆ ನಡೆದು ಮಸೂದೆ ಅಂಗೀಕಾರವಾಗಿದೆ. ಇಷ್ಟಾದರೂ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಜನರ ದಿಕ್ಕು ತಪ್ಪಿಸುವ ಸಂಚು ರೂಪಿಸುತ್ತಿವೆ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ಹಾಗೂ ಜಿ.ಪಂ. ಸದಸ್ಯ ರವೀಂದ್ರ ಬೆಳವಾಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next