ಚಿಕ್ಕಮಗಳೂರು: ದತ್ತಪೀಠದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹೊಸ ಪದ್ಧತಿಗಳನ್ನು ಆಚರಿಸಲಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ದತ್ತಪೀಠದ ಪರಿಸರದಲ್ಲಿ ಅಕ್ರಮ ಧ್ವನಿವರ್ಧಕ ಬಳಕೆ, ನಮಾಜ್ ಮಾಡುವುದು, ಅಜಾನ್ ಕೂಗುವ ಮೂಲಕ ನ್ಯಾಯಾಲಯ ಆದೇಶ ಉಲ್ಲಂಘನೆಯಾಗುತ್ತಿದೆ. ದತ್ತಪೀಠದಲ್ಲಿ ಅಕ್ರಮವಾಗಿ ಬಂದು ನೆಲೆಸಿರುವವರು ಮಾಂಸಹಾರ ಮಾಡುವುದು ಮತ್ತು ಅಲ್ಲಿಯೇ ಅಡಿಗೆ ಮಾಡಿ ಬಡಿಸುತ್ತಿರುವುದು ಕಂಡು ಬಂದಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಸಂಘಟನೆಯ ಮುಖಂಡರು ತಿಳಿಸಿದರು.
ಪವಿತ್ರ ದತ್ತಪೀಠದಲ್ಲಿ ಯಾವುದೇ ಹೊಸ ರೀತಿಯ ಪದ್ಧತಿಗಳನ್ನು ಮಾಡಬಾರದು ಎಂದು ನಿಯಮವಿದ್ದರೂ ಸಹ ಹೊಸ ಹೊಸ ಪದ್ಧತಿ ಆರಂಭಿಸುತ್ತಿರುವುದು, ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತು ಇಲ್ಲದಂತೆ ಮುಸಲ್ಮಾನರು ವರ್ತಿಸುತ್ತಿದ್ದಾರೆ. ಇವರ ವರ್ತನೆಗೆ ಕಡಿವಾಣ ಹಾಕಬೇಕು ಎಂದು ದೂರಿದರು.
ಜಿಲ್ಲೆಯ ಜಾಗರ ಹೋಬಳಿಯ ಇನಾಂ ದತ್ತತ್ರೇಯ ಗ್ರಾಮದಲ್ಲಿರುವ ಪವಿತ್ರ ದತ್ತಪೀಠದ ವಿವಾದವನ್ನು ಹೊಸ ರೀತಿಯಲ್ಲಿ ತಿರುಚಲು ಪ್ರಾರಂಭಿಸುತ್ತಿರುವ ಷಡ್ಯಂತ್ರವು ನೇರವಾಗಿ ಕಾಣುತ್ತಿದ್ದು ನ್ಯಾಯಾಲಯದ ಆದೇಶವನ್ನು ಮತ್ತು ಜಿಲ್ಲಾಡಳಿತದ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಧ್ವನಿವರ್ಧಕ ಬಳಸುತ್ತಿರುವುದನ್ನು ಮುಜುರಾಯಿ ಇಲಾಖೆ ತಡೆಯುವಲ್ಲಿ ವಿಫಲವಾಗಿದೆ. ದತ್ತಪೀಠ ಎಂಬುದು ಪವಿತ್ರ ಸ್ಥಾನವಾಗಿದ್ದು, ಈ ಸ್ಥಾನಕ್ಕೆ ಇರುವ ಪಾವಿತ್ರ್ಯತೆಯನ್ನು ಕೆಲ ಮತಾಂಧರು ಹದಗೆಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯಕ್ಕೆ ಕಿಮ್ಮತ್ತು ನೀಡದೆ ಗಲಭೆ ಸೃಷ್ಠಿಸಲು ನಡೆಸುತ್ತಿರುವ ಷಡ್ಯಂತ್ರವನ್ನು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಬೇಕೆಂದು ಒತ್ತಾಯಿಸಿದರು.
ಬಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ಜಿಲ್ಲಾ ಸಂಚಾಲಕ ತುಡಕೂರು ಮಂಜು, ರಂಗನಾಥ್, ಸಂತೋಷ್ ಕೋಟ್ಯಾನ್, ಸುಪ್ರೀತ್ ಇತರರು ಉಪಸ್ಥಿತರಿದ್ದರು.