ಚಿಕ್ಕಮಗಳೂರು: ಅನಾರೋಗ್ಯದ ವೃದ್ಧೆಯೊಬ್ಬರನ್ನು 3 ಕಿ.ಮೀ. ವರೆಗೂ ರಸ್ತೆ ಇಲ್ಲದೆ ಮಲೆನಾಡಿನ ಹಳ್ಳಿಯವರು ತೂಗು ಸೇತುವೆ ಮೇಲೆ ಎತ್ತಿಕೊಂಡು ಸಾಗಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಿ ಎಂಬ 70 ರ ವೃದ್ಧೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಆ ಹಳ್ಳಿಯಿಂದ ಮುಖ್ಯ ರಸ್ತೆಗೆ ಬರಲು 3 ಕಿ.ಮೀ. ಸಾಗಬೇಕಾಗಿರುವುದರಿಂದ ಹಳ್ಳಿಯ ಕೆಲವರು ಸೇರಿಕೊಂಡು ಲಕ್ಷ್ಮಿ ಅವರನ್ನು ಹೊತ್ತುಕೊಂಡು ಬಂದ ದೃಶ್ಯ ಕಂಡುಬಂತು.
ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆಯೇ ಹಳ್ಳಿಗರು ದಿನನಿತ್ಯ ಪಯಣಿಸುತ್ತಿದ್ದು, ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ, ಕಟ್ಟೆಮನೆ, ಕೋಣೆಮನೆ ಸೇರಿ 10ಕ್ಕೂ ಹೆಚ್ಚು ಹಳ್ಳಿಗೆ ರಸ್ತೆ ಇಲ್ಲ.
ಹಲವು ದಶಕಗಳಿಂದಲೂ ಭದ್ರಾ ನದಿಯ ತೂಗು ಸೇತುವೆ ಮೇಲೆ ಇವರು ಜೀವನ ನಡೆಸುತ್ತಿದ್ದಾರೆ. ಹಳ್ಳಿಯಿಂದ ಮುಖ್ಯ ರಸ್ತೆಗೆ ಬರಲು 3 ಕಿ.ಮೀ. ಸಾಗಬೇಕಾಗುತ್ತದೆ.
ಬೇಸಿಗೆಯಲ್ಲಿ ಭದ್ರೆಯ ಒಡಲಲ್ಲೇ ಗಾಡಿಗಳು ಓಡಾಡುತ್ತವೆ, ಆದರೆ ಮಳೆಗಾಲದಲ್ಲಿ ಆಗಲ್ಲ. ಭದ್ರಾ ನದಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಹಳ್ಳಿಯಲ್ಲಿರುವ ಸಾರ್ವಜನಿಕರು 7 ದಶಕ ಗಳಿಂದಲೂ ಮನವಿ ಮಾಡುತ್ತಿದ್ದರೂ, ಈವರೆಗೆ ಏನು ಪ್ರಯೋಜವಾಗಲಿಲ್ಲ ಎನ್ನುತ್ತಾರೆ ಸ್ಥಳೀಯರು.