Advertisement

ಮೂಡಿಗೆರೆಯಲ್ಲಿ ಕೊರೊನಾ ಕರ್ಫ್ಯೂಗಿಲ್ಲ ಕಿಮ್ಮತ್ತು

10:41 PM May 04, 2021 | Team Udayavani |

ಮೂಡಿಗೆರೆ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದರೂ ಸಹ ಜನ ಮಾತ್ರ ಯಾವುದಕ್ಕೂ ತಲೆಕಡಿಸಿಕೊಳ್ಳುತ್ತಿರುವ ಲಕ್ಷಣ ಕಾಣುತ್ತಿಲ್ಲ. ರಾಜ್ಯ ಸರ್ಕಾರವು ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಖರೀದಿಯ ಮಧ್ಯದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ದಿನಕಳೆದಂತೆ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಜನಗುಂಗುಳಿ ಜಾಸ್ತಿಯಾಗುತ್ತಿದ್ದು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಪಟ್ಟಣಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ.

Advertisement

ಅದರಲ್ಲೂ ಕೆಲವೇ ಕೆಲವು ಸಾರ್ವಜನಿಕರು ಈ ರೀತಿ ನಡೆದುಕೊಳ್ಳುತ್ತಿರುವುದು ಮನೆಗಳಲ್ಲಿಯೇ ಉಳಿದು ಕಾನೂನು ಪಾಲನೆ ಮಾಡುತ್ತಿರುವ ಜನರಿಗೆ ತೀವ್ರ ನಿರಾಸೆ ಹಾಗೂ ಆತಂಕ ಉಂಟು ಮಾಡಿದೆ. ಮಾಸ್ಕ್ ಧಾರಣೆ ನೆಪಕ್ಕೆ ಮಾತ್ರ ಎನ್ನುವಂತಿದ್ದು ಮೂಗಿನ ಕೆಳಗಿನವರೆಗೂ ಮಾತ್ರ ಮಾಸ್ಕ್ ಧಾರಣೆ ಮಾಡುತ್ತಿರುವ ಹಲವರು, ಸಾಮಾಜಿಕ ಅಂತರಕ್ಕೆ ಯಾವುದೇ ಮನ್ನಣೆ ನೀಡುತ್ತಿಲ್ಲ. ಸಿಕ್ಕ ಸಮಯದಲ್ಲಿಯೇ ಕನಿಷ್ಟ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಕ್ಕಪಕ್ಕದಲ್ಲಿಯೇ ಕುಳಿತು ಉಭಯಕುಶಲೋಪರಿ ಮಾತನಾಡಿಕೊಳ್ಳುವ ಜನರಿಗೇನು ಕಡಿಮೆ ಇಲ್ಲ. ಬೆಳಗ್ಗೆ ಏಳು ಗಂಟೆಯ ನಂತರ ಪಟ್ಟಣದ ರಸ್ತೆಗಳಲ್ಲಿ ವಾಹನ ದಟ್ಟಣೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದು, ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹಲವು ದೂರುಗಳು ಕೇಳಿ ಬರುತ್ತಿವೆ.

ಇತ್ತ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಹಗಲಿರುಳು ಎನ್ನದಂತೆ ಕೊರೊನಾ ಅಬ್ಬರಕ್ಕೆ ಬ್ರೇಕ್‌ ಹಾಕಲು ಹರಸಾಹಸ ಪಡುತ್ತಿದ್ದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿವೆ. ಕೊರೊನಾ 2ನೇ ಅಲೆಯ ಅಬ್ಬರವನ್ನು ಕಟ್ಟಿಹಾಕಲು ರಾಜ್ಯ ಸರ್ಕಾರವು ಕಠಿಣ ನಿಯಮಗಳ ಜೊತೆಗೆ ಜನತಾ ಕರ್ಫ್ಯೂವನ್ನು ಜಾರಿಗೆ ತಂದಿದ್ದರೂ ಸಹ ಕೆಲವೇ ಕೆಲವು ಸಾರ್ವಜನಿಕರ ಅಸಡ್ಡೆಯಿಂದಾಗಿ ತಾಲೂಕಿನ ಜನತೆ ಆತಂಕದಲ್ಲಿ ದಿನ ದೂಡುವಂತಾಗಿದೆ. ಇನ್ನು ಜನರಿಗೆ ಬುದ್ಧಿ ಹೇಳಬೇಕಾಗಿದ್ದ ಹಲವು ಜನಪ್ರತಿನಿ ಧಿಗಳು ಹಾಗೂ ಅಧಿ ಕಾರಿಗಳು ಹೆಸರಿಗೆ ಮಾತ್ರ ಮಾಸ್ಕ್ ಧಾರಣೆ ಮಾಡಿ ಸಾಮಾಜಿಕ ಅಂತರವಿಲ್ಲದೆ ನಗರ ಪ್ರದಕ್ಷಿಣೆ ಹಾಕಿದ್ದಾರೆ.

ಮೂರು ದಿನಗಳಿಗೊಮ್ಮೆ ಹಣ್ಣು- ತರಕಾರಿಗಳನ್ನು ಹಾಗೂ ತಿಂಗಳಿಗೆ ಒಮ್ಮೆ ದಿನಸಿ ಸಾಮಗ್ರಿಗಳನ್ನು ಖರೀದಿ ಮಾಡುವುದು ಸಾರ್ವಜನಿಕರು ಒಟ್ಟಾಗುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಡಾ|ಸಂತೋಷ್‌ ಅವರು, ಕೊರೊನಾ ಸೋಂಕಿನ ಎರಡನೇ ಅಲೆ ಎಲ್ಲರೂ ಅಂದುಕೊಂಡಷ್ಟು ಸಾಮಾನ್ಯವಾಗಿಲ್ಲ. ಪ್ರತೀ ನಿತ್ಯ ಸಾವುಗಳನ್ನು ಕಂಡರೂ ಸಹ ಬೇಜವಾಬ್ದಾರಿಯಿಂದ ಸುಮ್ಮನೆ ತಿರುಗಾಡುವುದು ಶ್ರೇಯಸ್ಸಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next