ಸಂದೀಪ ಜಿ.ಎನ್. ಶೇಡ್ಗಾರ್
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ದಿನ ನಿತ್ಯ ಕೊರೊನಾ ಸೋಂಕಿತರ ನಡುವೆ ಇದ್ದು ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಹೈರಾಣಾಗಿದ್ದು ಅವರ ಗೋಳು ಕೇಳುವವರು ಇಲ್ಲದಂತಾಗಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿರುವ ವೈದ್ಯರು ಮತ್ತು ನರ್ಸ್‌ಗಳು ದಿನದ 24 ಗಂಟೆಯೂ ಶಿಫ್ಟ್ ಆಧಾರದ ಮೇಲೆ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದು, ಒಂದು ಕಡೆ ರೋಗಿಗಳ ಜೀವ ಮತ್ತೂಂದು ಕಡೆ ಕೊರೊನಾ ಸೋಂಕಿನ ಭಯ. ಇದರ ನಡುವೆ ಕೆಲಸದ ಒತ್ತಡದಿಂದ ಕುಗ್ಗಿ ಹೋಗಿದ್ದಾರೆ.
ಕರ್ತವ್ಯ ಮುಗಿಸಿ ಮನೆಗೆ ಹೋಗಿ ಸಂತೋಷದಿಂದ ಮನೆಮಂದಿಯೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಮನೆಮಂದಿಗೆಲ್ಲ ಸೋಂಕು ತಗುಲಿಬಿಟ್ಟರೆ ಎಂಬ ಭಯ ಅವರನ್ನು ಕಾಡುತ್ತಿದ್ದು ಮನೆಯಲ್ಲೂ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುವ ದುಸ್ಥಿತಿಯನ್ನು ಕೋವಿಡ್ ಸೋಂಕು ತಂದಿಟ್ಟಿದೆ. ಜಿಲ್ಲೆಯಲ್ಲಿ ಕೆಲ ವೈದ್ಯರು ತಾವು ಮನೆಗೆ ಹೋದರೆ ಮನೆಯವರಿಗೂ ಕೋವಿಡ್ ತಗುಲಿದರೆ ಎಂಬ ಭಯದಿಂದ ಜಿಲ್ಲಾಡಳಿತ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ತೆರೆದಿರುವ ಹಾಸ್ಟೆಲ್ ಗಳಲ್ಲಿ ವಾಸ ಮಾಡುತ್ತಿದ್ದು ಮನೆ- ಹೆಂಡತಿ ಮಕ್ಕಳನ್ನು ನೋಡದೆ ಬಹುದಿನಗಳೇ ಕಳೆದು ಹೋಗಿಬಿಟ್ಟಿವೆ. ಜಿಲ್ಲಾಸ್ಪತ್ರೆಯಲ್ಲಿ 52 ಜನ ವೈದ್ಯರಿದ್ದು ಅದರಲ್ಲಿ ಅನೇಕರು ಕೋವಿಡ್ ಡ್ನೂಟಿ ಮಾಡುತ್ತಿದ್ದಾರೆ.
ಅವರೆಲ್ಲರೂ ಮನೆ ಮಂದಿಯೊಂದಿಗೆ ಬೇರೆಯಲು ಸಾಧ್ಯವಾಗದೆ ಒಂಟಿಯಾಗಿ ದಿನ ಕಳೆಯುವಂತಾಗಿದೆ. ಸರ್ಕಾರದ ನಿಯಮದಂತೆ 8 ಜನ ರೋಗಿಗಳು ಐಸಿಯುವಿನಲ್ಲಿ ಚಿಕಿತ್ಸೆ ಪಡೆಬೇಕೆಂದರೆ ಅವರನ್ನು ನಿರ್ವಹಣೆ ಮಾಡಲು ಒಬ್ಬರುಫಿಜಿಶಿಯನ್, ಒಬ್ಬರು ಅನಾಸ್ತೇಷಿಯ ವೈದ್ಯರು ಇರಬೇಕೆಂದು ಇದೆ. ಆದರೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ 18 ಜನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ನಿರ್ವಹಣೆಗೆ ಇಬ್ಬರು ಫಿಜಿಶಿಯನ್ ಮತ್ತು ಇಬ್ಬರು ಅನಾಸ್ತೇಷಿಯ ವೈದ್ಯರು ಮಾತ್ರ ಇದ್ದಾರೆ. ಇವರು ಹಗಲು ರಾತ್ರಿಯೆನ್ನದೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆನ್‌ಗೊàಯಿಂಗ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿರುವ ವೈರಾಜಿಕಲ್ ಲ್ಯಾಬ್‌ನಲ್ಲಿ 2000ಕ್ಕೂ ಹೆಚ್ಚು ರಕ್ತದ ಮಾದರಿ ಮತ್ತು ಗಂಟಲ ದ್ರವ ಪರೀಕ್ಷೆ ನಡೆಸಬೇಕಿದ್ದು ಇಲ್ಲಿಯ ತಾಂತ್ರಿಕ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಇನ್ನು ನಸ್ ಗಳು ಮತ್ತು ಡಿ- ಗ್ರೂಪ್ ನೌಕರರು ದಿನವಿಡೀ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಿ ಬೇಸತ್ತು ಈ ಕೊರೊನಾ ತೊಲಗಿದರೇ ಸಾಕಪ್ಪ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದು ಜಿಲ್ಲಾಸ್ಪತ್ರೆಯ ಸ್ಥಿತಿಯಾದರೇ ತಾಲೂಕು ಆಸ್ಪತ್ರೆಗಳ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯ ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿ ಒಬ್ಬರು ವೈದ್ಯರಿದ್ದು ಅವರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು. ಜೊತೆಗೆ ಇತರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲದಿರುವುದರಿಂದ ವೈದ್ಯರ ಮೇಲೆ ಕೆಲಸದ ಒತ್ತಡ ಹೆಚ್ಚುವಂತೆ ಮಾಡಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇದ್ದಿದ್ದರೆ ಸುಮಾರು 700 ಜನ ವೈದ್ಯರು ಇರುತ್ತಿದ್ದರು. ಆದರೆ, ಜಿಲ್ಲೆಯಲ್ಲಿ ಇರುವಂತಹ ಕಡಿಮೆ ವೈದ್ಯರು ಕೋವಿಡ್ ಚಿಕಿತ್ಸೆ ನೀಡಬೇಕು. ಇತರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಚಿಕಿತ್ಸೆ ನೀಡಬೇಕು. ಇದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಕುಗ್ಗಿ ಹೋಗಿದ್ದಾರೆ. ಹೆಸರು ಹೇಳಲಿಚ್ಛಿಸದ ವೈದ್ಯರು.
ಕೋವಿಡ್ ಕಷ್ಟಕಾಲದಲ್ಲಿ ವೈದ್ಯರ ಕೊರತೆಯಾಗದಂತೆ ಮತ್ತು ವೈದ್ಯರ ಮೇಲಾಗುತ್ತಿರುವ ಒತ್ತಡವನ್ನು ನಿವಾರಿಸಲು ಸರ್ಕಾರ 10 ವೈದ್ಯರು, 20ನರ್ಸ್‌ಗಳು ಹಾಗೂ 20 ಜನ ಡಿ- ಗ್ರೂಪ್ ನೌಕರರನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ. 20 ಜನ ನರ್ಸ್ ಮತ್ತು 20 ಜನ ಡಿ-ಗ್ರೂಪ್ ನೌಕರರನ್ನು ನೇಮಕ ಮಾಡಲಾಗಿದೆ. 10 ವೈದ್ಯರ ನೇಮಕಕ್ಕೆ ವೈದ್ಯರೆ ಮುಂದೆ ಬರುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಉಮೇಶ್ ತಿಳಿಸಿದ್ದಾರೆ.