ಚಿಕ್ಕಮಗಳೂರು: ಜಿಲ್ಲಾದ್ಯಂತ ಆರ್ಭಟಿಸಿದ್ದ ಮಳೆ ಸದ್ಯ ನಿಂತಿದೆ. ಭಾರೀ ಮಳೆಯಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದೆ. ಭಾರೀ ಮಳೆಗೆ ಜಿಲ್ಲಾದ್ಯಂತ ಅಂದಾಜು 150 ಕೋಟಿ ರೂ.ನಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿದು ಭಾರೀ ಅನಾಹುತ ಸೃಷ್ಟಿಸಿದ್ದವು. ಹಳ್ಳ-ಕೊಳ್ಳಗಳು ತುಂಬಿ ಹರಿದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿತ್ತು. ಜಿಲ್ಲಾದ್ಯಂತ ಜೂನ್ ತಿಂಗಳಿಂದ ಜು.26ರ ವರೆಗೂ ಸುರಿದ ಮಳೆಗೆ 215 ಮನೆಗಳಿಗೆ ಸಂಪೂರ್ಣ ಮತ್ತು ಭಗಶಃ ಹಾನಿಯಾಗಿದೆ.
ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ 34 ಮನೆಗಳಿಗೆ ಹಾನಿಯಾಗಿದೆ ಮೂಡಿಗೆರೆ ತಾಲೂಕಿನಲ್ಲಿ 37 ಮನೆಗಳಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನಲ್ಲಿ 9 ಮನೆ, ಕಡೂರು 30, ತರೀಕೆರೆ 51, ಅಜ್ಜಂಪುರ 18 ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ 28 ಮನೆ, ಶೃಂಗೇರಿ 8 ಮನೆಗಳಿಗೆ ಹಾನಿಯಾಗಿದೆ.
ಮಳೆಯ ಆರ್ಭಟಕ್ಕೆ ಚಿಕ್ಕಮಗಳೂರು ತಾಲೂಕು ಕ್ಯಾತನಬೀಡು ಗ್ರಾಮದ ಬಸವೇಗೌಡ (65) ಅವರು ಮೃತಪಟ್ಟಿದ್ದರು. ಹಸುವಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋದ ಸಂದರ್ಭದಲ್ಲಿ ಕೊಟ್ಟಿಗೆ ಗೋಡೆ ಕುಸಿದು, ಗೋಡೆ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು. ಸ್ಥಳಕ್ಕೆ ಚಿಕ್ಕಮಗಳೂರು ತಹಶೀಲ್ದಾರ್ ಡಾ|ಕೆ.ಜೆ. ಕಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ.
ಮಳೆಗೆ ಆರ್ಭಟಕ್ಕೆ ಸಿಲುಕಿದ್ದ 3 ಹಸುಗಳು ಅಸುನೀಗಿವೆ. ಜಿಲ್ಲೆ ಮಲೆನಾಡು ಮತ್ತು ಬಯಲು ಸೀಮೆ ಭೂ ಪ್ರದೇಶವನ್ನು ಹೊಂದಿದ್ದು, ಭೌಗೋಳಿಕವಾಗಿ ಸವಿಸ್ತಾರವಾಗಿದ್ದು ಭಾರೀ ಮಳೆಯ ಪರಿಣಾಮ 324 ಕಿ.ಮೀ. ರಸ್ತೆ ಹಾನಿಯಾಗಿದೆ. ಜಿಲ್ಲೆಯಲ್ಲಿ 2 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಮಳೆ, ಭಾರೀ ಗಾಳಿಯ ಪರಿಣಾಮ 839 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಭಾರೀ ಪ್ರಮಾಣ ಹಾನಿಯಾಗಿದೆ. ಹಾಗೇ ಬಾರೀ ಮಳೆಯಿಂದ ಮರಗಳು ಧರೆಗುರುಳಿದ್ದು, 66 ಕಿ.ಮೀ. ಉದ್ದದ ವಿದ್ಯುತ್ ಲೈನ್‌ಗೆ ಹಾನಿಯಾಗಿದೆ.
ಮಳೆಯ ರುದ್ರನರ್ತನಕ್ಕೆ ಜಿಲ್ಲಾದ್ಯಂತ ಪಿಡಬುÉÂಡಿ ಇಲಾಖೆ ವ್ಯಾಪ್ತಿಗೆ ಒಳಪಡುವ 839 ಕಿ.ಮೀ.ನಷ್ಟು ರಸ್ತೆಗೆ ಹಾನಿಯಾಗಿದೆ. ಹಾಗೆಯೇ ಜಿಲ್ಲಾದ್ಯಂತ ಸಂಪರ್ಕ ಕಲ್ಪಿಸುವ 18 ಸೇತುವೆಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ.ಹಾಗೂ 2 ಕೆರೆಗಳಿಗೆ ಹಾನಿಯಾಗಿದೆ. ವಾರದಿಂದ ಸುರಿದ ಭಾರೀ ಮಳೆಯ ಪರಿಣಾಮ ನದಿಗಳ ತಗ್ಗು ಪ್ರದೇಶ, ಹಳ್ಳಕೊಳ್ಳಗಳಲ್ಲಿ ಮಳೆನೀರು ನುಗ್ಗಿದ ಪರಿಣಾಮ ನದಿಪಾತ್ರದ ಜಮೀನು, ಕಾತೋಟ, ಅಡಕೆ ತೋಟಗಳಿಗೆ ಮತ್ತು ಭತ್ತದ ಗದ್ದೆಗಳಿಗೆ ಪ್ರವಾಹದ ನೀರು ಹರಿದಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.
ಸಂಬಂಧಪಟ್ಟ ಇಲಾಖೆಗಳು ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದು ಜಿಲ್ಲೆಯಲ್ಲಿ ಸುಮಾರು 150 ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.