ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿದ ಮಳೆ ಶನಿವಾರ ಬಿಡುವು ನೀಡಿದ್ದು ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ತುಂಗಾ, ಭದ್ರಾ, ಹೇಮಾವತಿ ನದಿಗಳ ಅಬ್ಬರ ಕಡಿಮೆಯಾಗಿದೆ. ಗುರುವಾರ, ಶುಕ್ರವಾರ ಮಲೆನಾಡಿನಾದ್ಯಂತ ಭಾರೀ ಮಳೆಯಾಗಿದ್ದು, ನದಿ ಹಳ್ಳಕೊಳ್ಳಗಳು ಉಕ್ಕಿ ಹರಿದಿದ್ದವು. ನದಿ ನೀರು ಹೊಲಗದ್ದೆಗಳಿಗೆ ಹರಿದು ಜಲಾವೃತಗೊಂಡಿದ್ದವು.
ಭೂ ಕುಸಿತ, ಹಳ್ಳಕೊಳ್ಳಗಳ ನೀರು ರಸ್ತೆ ಮೇಲೆ ಹರಿದಿದ್ದು ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ಶುಕ್ರವಾರ ರಾತ್ರಿಯಿಂದ ಮಳೆಯ ಆರ್ಭಟ ಕ್ಷೀಣಿಸಿದ್ದು ಶನಿವಾರ ಮುಂಜಾನೆ ಮಲೆನಾಡು ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ಮಳೆ ವೇಳೆಗೆ ಸಂಪೂರ್ಣ ಬಿಡುವು ನೀಡಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಚಿಕ್ಕಮಗಳೂರು ಸುತ್ತಮುತ್ತ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಊರುಬಗೆ ಹೊಸಳ್ಳಿ ರಸ್ತೆ ಜಲಾವೃತಗೊಂಡಿತ್ತು. ಭತ್ತದ ಗದ್ದೆಗಳಿಗೆ ನೀರು ನುಗ್ಗಿತ್ತು. ಮೂಡಿಗೆರೆ, ಕಳಸ ಭಾಗದಲ್ಲಿ ಮಳೆ ಕ್ಷೀಣಿಸಿದ್ದು, ಭದ್ರಾನದಿ ನೀರಿನಲ್ಲಿ ಮುಳುಗಿದ್ದ ಹೆಬ್ಟಾಳೆ ಸೇತುವೆ, ತೆರವುಗೊಂಡಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಚಾರ್ಮಾಡಿ ಘಾಟಿ, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಕಿರುಗುಂದ ಗೋಣಿಬೀಡು ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದ್ದು ಮೋಡ ಕವಿದ ವಾತಾವರಣ ಮುಂದುವರಿದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ವಸ್ತಾರೆ, ಮಲ್ಲಂದೂರು, ಆಣೂರು, ಅತ್ತಿಗುಂಡಿ ಭಾಗದಲ್ಲಿ ಮಳೆ ಕ್ಷೀಣಿಸಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ ತಾಲೂಕಿನ ಬಾಳೆಹಳ್ಳಿ ಗ್ರಾಮದ ಜಯರಾಮ್ ಎಂಬುವವರ ಮನೆಗೋಡೆ ಕುಸಿದು ಬಿದ್ದಿದೆ. ಜಯರಾಮ್ ಪತ್ನಿ ಮತ್ತು ಮಗ ಮನೆ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪ ತಾಲೂಕು ಲೋಕನಾಥಪುರ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ಆಂಧ್ರ ಪ್ರದೇಶ ಮೂಲದವರಾಗಿದ್ದು ಉಡುಪಿ ಕಡೆಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗುತ್ತಿದೆ. ಎರಡು ದಿನಗಳಿಂದ ಎಡೆಬಿಡದೆ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದಲ್ಲಿ ಮಳೆಯಾಗಿದ್ದು ನದಿಪಾತ್ರದ ಅಡಕೆ ತೋಟ, ಕಾμ, ಭತ್ತದ ಗದ್ದೆಗಳಿಗೆ ನುಗ್ಗಿದ ನೀರು ಇಳಿಕೆಯಾಗಿದೆ.
ಈ ಭಾಗದಲ್ಲಿ ಮಳೆ ಕ್ಷೀಣಿಸಿದ್ದು ಮೋಡ ಕವಿದ ವಾತಾವರಣ ಮುಂದುವರಿದಿದ್ದು ಆಗಾಗ್ಗೆ ಮಳೆಯಾಗುತ್ತಿದೆ.