ಚಿಕ್ಕಮಗಳೂರು: ಕೊಬ್ಬರಿ ಎಣ್ಣೆ ಗಾಣಕ್ಕೆ ತಂದೆ ಜತೆಗೆ ಬಂದಿದ್ದ ಮಗಳು ಕಾಣೆಯಾಗಿದ್ದ ಪ್ರಕರಣದಲ್ಲಿ ಮಗು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.
ತರೀಕೆರೆ ಠಾಣಾ ವ್ಯಾಪ್ತಿಯ ಬೆಟ್ಟದ ತಾವರೆಕೆರೆ ಗ್ರಾಮದ ಪ್ರಕಾಶ್ ಮತ್ತು ಮೇರಿ ದಂಪತಿಗಳು ಮಗುವನ್ನು ಶುಕ್ರವಾರ (ಅ.25) ತರೀಕೆರೆ ಪೊಲೀಸ್ ಠಾಣೆ ತಂದು ಒಪ್ಪಿಸಿದ್ದಾರೆ.
ಕಡೂರು ತಾಲೂಕಿನ ಯಗಟಿ ಸಮೀಪದ ಸೀತಾಪುರ ಹಟ್ಟಿ ತಾಂಡ್ಯದ ರಘುನಾಯಕ್ ಹಾಗೂ ಮಗಳು ಮಾನಸ ಗುರುವಾರ (ಅ.24) ಕಡೂರು ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿನ ಕೊಬ್ಬರಿ ಎಣ್ಣೆ ಬಿಡಿಸುವ ಗಾಣದ ಬಂದಿದ್ದ ವೇಳೆ ಮಗು ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದ ರಘು ನಾಯಕ್ ಪಕ್ಕದ ಅಂಗಡಿ ಸಿಸಿ ಟಿವಿ ಪರಿಶೀಲಿಸಿದಾಗ ಮಹಿಳೆಯೊಬ್ಬರು ಮಗುವನ್ನು ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು.ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ವಿವರ: ರಘು ನಾಯಕ್ ಕೊಬ್ಬರಿ ಎಣ್ಣೆ ಗಾಣಕ್ಕೆ ಮಗಳು ಮಾನಸಳೊಂದಿಗೆ ಆಗಮಿಸಿದ್ದು ಮಗುವನ್ನು ಬೈಕ್ ಬಳಿ ಬಿಟ್ಟು ಎಣ್ಣೆ ಗಾಣದಲ್ಲಿ ಕೊಬ್ಬರಿ ಇಡಲು ಹೋಗಿದ್ದು ಮಗುವನ್ನು ಕರೆತಂದಿದ್ದನ್ನು ಮರೆತು ಅಲ್ಲಿಂದ ನೇರವಾಗಿ ಮದ್ಯಪಾನ ಮಾಡಲು ತೆರಳಿದ್ದಾನೆ.
ಈ ವೇಳೆ ಮಗು ಅಳುತ್ತಿರುವುದನ್ನು ಗಮನಿಸಿದ ತರೀಕೆರೆ ತಾಲೂಕು ಶಿವಪುರ ಸಮೀಪದ ಚಟ್ನಹಳ್ಳಿ ಗ್ರಾಮದ ಓಂಕಾರಪ್ಪ ಮತ್ತು ದಂಪತಿಗಳು ಮಗುವನ್ನು ಸಂತೈಸಿ ಪೋಷಕರು ಯಾರಾದರೂ ಬರಬಹುದು ಎಂದು ಅರ್ಧ ಗಂಟೆಗೂ ಹೆಚ್ಷು ಕಾಲ ಕಾದಿದ್ದಾರೆ. ಯಾರು ಬಾರದಿರುವ ಹಿನ್ನಲೆಯಲ್ಲಿ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಗ್ರಾಮಕ್ಕೆ ತೆರಳಿದ್ದಾರೆ.
ಮಗು ನಾಪತ್ತೆಯಾಗಿರುವ ಪ್ರಕರಣ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರಿಗೆ ವಿಚಾರ ತಿಳಿಸಿದ್ದಾರೆ.
ವಿಚಾರ ತಿಳಿದ ಬೆಟ್ಟದ ತಾವರೆಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ಮಗುವನ್ನು ತರೀಕೆರೆ ಠಾಣೆಗೆ ಮಗುವನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು ಕಾಣೆ ಪ್ರಕರಣ ಸುಖಾಂತ್ಯ ಕಂಡಿದೆ.