Advertisement

ಸತ್ಕಾರ್ಯಗಳಿಂದ ಅಭಿವೃದ್ಧಿ ಸಾಧ್ಯ: ರಂಭಾಪುರಿ ಶ್ರೀ

10:51 PM Jul 08, 2021 | Team Udayavani |

ಬಾಳೆಹೊನ್ನೂರು: ಮನುಷ್ಯ ಜೀವನದಲ್ಲಿ ಆಶಾವಾದಿಯಾಗಿ ಬದುಕಬೇಕಲ್ಲದೇ, ನಿರಾಶಾವಾದಿ ಯಾಗಿ ಬಾಳಬಾರದು. ಸತ್ಕಾರ್ಯಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ|ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

Advertisement

ತಿಪಟೂರು ಶ್ರೀ ಜಗದ್ಗುರು ರೇಣುಕ ಮಂದಿರದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಮಂಗಲ ಭವನದ ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ವೀರಶೈವ ಧರ್ಮ ಉದಾತ್ತವಾದ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವದ ಆದರ್ಶ ಚಿಂತನಗಳನ್ನು ಬೋಧಿಸಿದ್ದು ನಮ್ಮೆಲ್ಲರಿಗೆ ದಾರಿದೀಪ.

ಬಾಳೆಹೊನ್ನೂರು ಧರ್ಮ ಪೀಠದಿಂದ ನಗರದಲ್ಲಿ ಸಭಾಭವನ ನಿರ್ಮಾಣಗೊಳ್ಳಬೇಕೆಂಬ ಬಹಳ ದಿನಗಳ ಕನಸು ಇಂದು ಸಾಕಾರಗೊಳ್ಳುತ್ತಿರುವುದು ಸಂತೋಷದ ಸಂಗತಿ. ಸಾಸಲು ಮರುಳಸಿದ್ಧಪ್ಪ ಮತ್ತು ಮಕ್ಕಳು ದಾನ ಮಾಡಿದ ವಿಶಾಲ ನಿವೇಶನದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಲ ಭವನ ನಿರ್ಮಾಣಗೊಳಿಸುವ ಉದ್ದೇಶವಿದೆ. ಅವಿನಾಭಾವ ಸಂಬಂಧ ಹೊಂದಿದ ಶ್ರೀ ರಂಭಾಪುರಿ ಪೀಠದ ಸತ್ಕಾರ್ಯಗಳಿಗೆ ಭಕ್ತರ ಸಹಕಾರ ಅವಶ್ಯಕ. ಎಲ್ಲರ ಸಹಕಾರದಿಂದ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಶಾಸಕ ಬಿ.ಸಿ.ನಾಗೇಶ ಮಾತನಾಡಿ, ಧರ್ಮ ಪೀಠಗಳ ಮಾರ್ಗದರ್ಶನ ನಮ್ಮೆಲ್ಲರಿಗೆ ಆಶಾಕಿರಣ. ಧಾರ್ಮಿಕ ಕಾರ್ಯಗಳ ಜೊತೆಗೆ ಜನಹಿತಾತ್ಮಕ ಕಾರ್ಯಗಳನ್ನು ರಂಭಾಪುರಿ ಪೀಠ ಮಾಡುತ್ತಾ ಬಂದಿದೆ. ಮಾನವ ಧರ್ಮಕ್ಕೆ ಜಯವಾಗಲೆಂಬ ಉದಾತ್ತ ಸಂದೇಶ ಶ್ರೀ ಪೀಠ ಕೊಟ್ಟಿದೆ. ನಿರ್ಮಾಣಗೊಳ್ಳಲಿರುವ ಮಂಗಲ ಭವನಕ್ಕೆ ಶಾಸಕರ ಅನುದಾನದಲ್ಲಿ ಸಹಕರಿಸುವುದಾಗಿ ತಿಳಿಸಿದರು.

ನೊಣವಿನಕೆರೆ ಕರಿವೃಷಭ ಶಿವಯೋಗಿಶ್ವರ ಸ್ವಾಮಿಗಳು, ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ನಗರಸಭಾಧ್ಯಕ್ಷ ರಾಮಮೋಹನ್‌, ನಗರಸಭಾ ಸದಸ್ಯ ಸಂಗಮೇಶ ಮುಖ್ಯ ಅತಿಥಿಗಳಾಗಿದ್ದರು.

Advertisement

ಮಹೇಶ್ವರಯ್ಯ, ಟಿ.ಎಸ್‌.ಪರಶಿವಯ್ಯ, ಉಮಾಪತಿ, ಎಸ್‌.ಎಂ. ಸರ್ವೇಶ ಸೇರಿದಂತೆ ವೀರಶೈವ ಸಮಾಜದ ಗಣ್ಯರು ಮತ್ತು ದಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗದಿಗೆಯ್ಯ ಹಿರೇಮಠರಿಂದ ವೇದಘೋಷ, ಗಂಗಾಧರಸ್ವಾಮಿ ಇವರಿಂದ ಭಕ್ತಿಗೀತೆ, ನಂದಕುಮಾರ್‌ ಸ್ವಾಗತಿಸಿ, ತೋಂಟದಾರ್ಯ ನಿರೂಪಿಸಿ, ಎನ್‌. ಬಸವಯ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next