ಶೃಂಗೇರಿ: ಮಳೆಗಾಲ ಸಮೀಪಿಸುತ್ತಿದ್ದಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜನರಿಗೆ ಸಂಚಾರದ್ದೇ ದೊಡ್ಡ ಸಮಸ್ಯೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಹಳ್ಳಗಳು ಸಾಕಷ್ಟಿದ್ದು, ದೂರ- ದೂರವಿರುವ ಮನೆಗಳಿಗೆ ಸಂಪರ್ಕಕ್ಕೆ ಹಳ್ಳಗಳನ್ನು ದಾಟಿ ಹೋಗಬೇಕು. ಉದ್ಯಾನ ವ್ಯಾಪ್ತಿಯ ನೆಮ್ಮಾರ್, ಕೆರೆ, ಕೂತಗೋಡು, ಮರ್ಕಲ್ ಹಾಗೂ ಬೇಗಾರು ಗ್ರಾಪಂನಲ್ಲಿ ಅನೇಕ ಹಳ್ಳಗಳಿಗೆ ಕಾಲುಸಂಕವೇ ಸಂಚಾರಕ್ಕೆ ಆಸರೆಯಾಗಿದೆ.
ಕಳೆದ ಮೂರು ವರ್ಷದಲ್ಲಿ ಅತಿವೃಷ್ಠಿಯಿಂದ ಅನೇಕ ಕಾಲುಸಂಕಗಳು ಪ್ರವಾಹಕ್ಕೆ ಸಿಲುಕಿ ಮಳೆಗಾಲ ಮುಗಿಯುವ ಮುನ್ನವೇ ಕೊಚ್ಚಿ ಹೋಗಿದ್ದವು. ಮಳೆಗಾಲ ಆರಂಭವಾದಂತೆ ಗ್ರಾಮಸ್ಥರು ಸೇರಿಕೊಂಡು ಕಾಲುಸಂಕ ನಿರ್ಮಾಣ ಮಾಡುತ್ತಾರೆ. ತಾಲೂಕಿನಲ್ಲಿ 50 ಕ್ಕೂ ಹೆಚ್ಚು ಕಾಲುಸಂಕಗಳಿದ್ದು, ಕೆಲವೇ ಕಾಲುಸಂಕಗಳು ಕಿರು ಸೇತುವೆಯಾಗಿವೆ.
ನೆಮ್ಮಾರ್ ಗ್ರಾಪಂನ ಮೀನುಗರಡಿ, ಹುಲಗರಡಿ, ವಂದಗದ್ದೆ, ಮುಂಡೋಡಿ, ಹೆಮ್ಮಿಗೆಯಲ್ಲಿ ಕಾಲುಸಂಕವಿದ್ದು, ಕಿರು ಸೇತುವೆ ನಿರ್ಮಾಣವಾಗಬೇಕಿದೆ. ಹೆಮ್ಮಿಗೆಯಲ್ಲಿ 2019ರಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆಗೆ ವನ್ಯಜೀವಿ ಇಲಾಖೆ ತಡೆಯೊಡ್ಡಿದ್ದರಿಂದ ಸೇತುವೆ ಕಾಮಾಗಾರಿ ಸ್ಥಗಿತಗೊಳಿಸಲಾಗಿತ್ತು. ಹೊರಣೆ ಹಳ್ಳದ ಕಿರು ಸೇತುವೆ ಕೊಚ್ಚಿಹೋಗಿದ್ದು, ಪುನರ್ ನಿರ್ಮಾಣವಾಗಬೇಕಿದೆ.
ಬೇಗಾರು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಸಾಕಷ್ಟು ಕಿರು ಸೇತುವೆಗಳನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. ನೀಲಂದೂರು ಗ್ರಾಮದ ಮೂಡಿಗೇರಿ, ಬೆಳಗೋಡುಕೊಡಿಗೆ, ತಾರೋಳ್ಳಿಕೊಡಿಗೆ, ಬೈಲ್‌ಬಾರ್ ಹಾರಗೊಪ್ಪಕ್ಕೆ ಇನ್ನೂ ಕಿರು ಸೇತುವೆ ಆಗಬೇಕೆಂಬುದು ಜನರ ಬೇಡಿಕೆಯಾಗಿದೆ. ಕೆ.ಮಸಿಗೆ ಗ್ರಾಮದಲ್ಲಿ ಹೊಸ ಕಿರು ಸೇತುವೆ ನಿರ್ಮಾಣವಾಗಿದ್ದು, ಸಂಚಾರಕ್ಕೆ ಅನೂಕೂಲವಾಗಿದೆ.
ಕೆರೆ ಗ್ರಾಪಂನ ಹಾದಿ, ಭಲೆಕಡಿ ಗ್ರಾಮದ ಹುಲ್ಗಾರ್‌ಬೈಲು ಹಳ್ಳ, ಗುಲುಗುಂಜಿಮನೆಯ ಹೊರಣೆ ಹಳ್ಳ, ಬಾಳ್ಗೆರೆ ಗ್ರಾಮದ ಉಡ್ತಾಳ್ ಹೊಲ್ಮ, ಹಾದಿ ಗ್ರಾಮದ ಎಮ್ಮೆಗುಂಡಿಯಲ್ಲಿ ಕಿರು ಸೇತುವೆ ಬೇಕಿದೆ. ಮಳೆಗಾಲ ಆರಂಭವಾದ ನಂತರ ಬಹುತೇಕ ಇರುವ ಮಣ್ಣಿನ ರಸ್ತೆಗಳು ಕೊಚ್ಚಿ ಹೋಗಿ ಸಂಚಾರ ದುಸ್ತರವಾಗುತ್ತದೆ. ವನ್ಯಜೀವಿ ಅರಣ್ಯ ಇಲಾಖೆಯು ಅಭಿವೃದ್ಧಿಗೆ ಅನುಮತಿ ನೀಡದಿರುವುದು ಡಾಂಬರೀಕರಣಕ್ಕೆ ಅಡ್ಡಿಯಾಗಿದೆ.