ಚಿಕ್ಕಮಗಳೂರು: ಜಿಲ್ಲಾದ್ಯಂತ ಮುಂಗಾರು ಮಳೆ ಅಡಿಯಿಟ್ಟಿದ್ದು, ಶನಿವಾರ ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಚಿಕ್ಕಮಗಳೂರು ಸುತ್ತಮುತ್ತ ಬಯಲು ಸೀಮೆ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದ್ದು ಅಲ್ಲಲ್ಲಿ ತುಂತುರು ಮಳೆಯಾಗಿದೆ.
ಜಿಲ್ಲೆಯ ಮೂಡಿಗೆರೆ, ಕಳಸ, ಹೊರನಾಡು, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ಸುತ್ತಮುತ್ತ ಮೋಡ ಕವಿದ ವಾತಾವರಣ, ತಣ್ಣನೆ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು, ಆಲ್ದೂರು, ಕಡೂರು, ಬೀರೂರು, ತರೀಕೆರೆ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆಯಾಗಿದೆ.
ಮುಂಗಾರು ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆ ಗರಿಗೆದರುತ್ತಿದೆ. ಮಲೆನಾಡು ಭಾಗದಲ್ಲಿ ಅಡಕೆ, ಕಾಫಿ, ಕಾಳುಮೆಣಸು, ಭತ್ತ ಕೃಷಿ ಚಟುವಟಿಕೆ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಬಯಲು ಸೀಮೆ ಭಾಗದಲ್ಲಿ ಈರುಳ್ಳಿ, ಆಲೂಗಡ್ಡೆ ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ನಡೆಯುತ್ತಿದ್ದು ಈ ಬೆಳೆಗಳಿಗೆ ಮಳೆ ವರದಾನವಾಗಿದೆ.
ಮುಂಗಾರು ಮಳೆ ಜಿಲ್ಲೆಯನ್ನು ಪ್ರವೇಶಿಸಿದ್ದು, ಬತ್ತಿ ಹೋಗಿದ್ದ ಹಳ್ಳಕೊಳ್ಳಗಳು ಮರುಜೀವ ಪಡೆದುಕೊಳ್ಳಲಿವೆ. ಬತ್ತಿ ಹೋಗಿದ್ದ ಗುಡ್ಡದಲ್ಲಿ ಜೀವಸೆಲೆಗಳು ಕಾಣಿಸಿಕೊಳ್ಳಲಿವೆ. ಇಳಿದು ಬರುವ ಝರಿಗಳು ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಮತ್ತು ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಮಳೆಗಾಲದಲ್ಲಿ ನದಿ ನೀರು ಉಕ್ಕಿ ಜಮೀನುಗಳ ಮೇಲೆ ಹರಿಯುವುದರಿಂದ ನದಿ ನೀರಿನಿಂದ ಹತ್ತಿ ಬರುವ ಏಡಿ ಮೀನು ಶಿಕಾರಿಗೆ ಮಲೆನಾಡಿನ ಜನರು ತಯಾರಿ ನಡೆಸುತ್ತಿದ್ದಾರೆ.
ಭತ್ತದ ಗದ್ದೆಗಳಲ್ಲಿ ಹೇರಳವಾಗಿ ಕಂಡುಬರುವ ಹುಲ್ಲೇಡಿ ಬೇಟೆಗೆ ತಯಾರಿ ನಡೆಯುತ್ತಿದ್ದು ಲಾಕ್ ಡೌನ್ ಸಮಯದಲ್ಲಿ ಕೈಗಳಿಗೆ ಕೆಲಸವಿಲ್ಲದೆ ಮನೆಯಲ್ಲಿರುವ ನಿರುದ್ಯೋಗಿಗಳಿಗೆ ಹುಲ್ಲೇಡಿಗಳು ಕೆಲಸ ನೀಡುತ್ತವೆ. ಜಿಲ್ಲಾದ್ಯಂತ ಮುಂಗಾರು ಮಳೆ ಪ್ರವೇಶವಾಗಿದ್ದು ಮಳೆಗಾಲದ ಸವಿಯನ್ನು ಸವಿಯಲು ಜಿಲ್ಲೆಯ ಜನತೆ ಅಣಿಯಾಗುತ್ತಿದ್ದಾರೆ.