ಚಿಕ್ಕಮಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪತ್ರ ಚಳುವಳಿ ನಡೆಸಲಾಯಿತು. ಮಂಗಳವಾರ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಪಕ್ಷದ ಪದಾ ಧಿಕಾರಿಗಳು ಮತ್ತು ಕಾರ್ಯಕರ್ತರು ಅಂಚೆಕಾರ್ಡ್‌ಗಳನ್ನು ಪಡೆದು ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಇಳಿಸಿ ಬಡವರನ್ನು ರಕ್ಷಿಸಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿಗೆ ಪತ್ರ ರವಾನಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮಾತನಾಡಿ, ದೇಶದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2014ರಿಂದ ಇಲ್ಲಿಯವರೆಗೂ 300 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತು ಇಳಿಕೆ ಮಾಡಿದೆ ಎಂದರು.
ಇಂಧನ ಬೆಲೆ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ ಎಂದ ಅವರು, ದೇಶದ ಜನತೆಯ ವಿರೋಧದ ನಡುವೆಯೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ರಸಗೊಬ್ಬರ ಬೆಲೆ ದಿನೇ ದಿನೇ ಏರುತ್ತಿದ್ದು, ಪ್ರಧಾನ ಮಂತ್ರಿಗಳ ಅಚ್ಚೇ ದಿನ್ ಆಯೇಗಾ ಭರವಸೆ ಹುಸಿಯಾಗಿದೆ ಎಂದು ದೂರಿದರು.
ಪತ್ರ ಚಳುವಳಿಯನ್ನು ಇಂದಿನಿಂದ ಆಯೋಜಿಸಿದ್ದು ಪ್ರತೀ ದಿನ ಪಕ್ಷದ ಪದಾಧಿ ಕಾರಿಗಳು ಮತ್ತು ಕಾರ್ಯಕರ್ತರು ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಪತ್ರ ರವಾನಿಸಲಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತಕ್ಷಣ ಬೆಲೆ ಇಳಿಕೆ ಮಾಡಬೇಕು. ಇಲ್ಲದಿದ್ದಲ್ಲಿ ಬೆಲೆ ಇಳಿಸಿ ಅಥವಾ ಅಧಿಕಾರ ತ್ಯಜಿಸಿ ಎಂದು ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ|ಡಿ.ಎಲ್. ವಿಜಯಕುಮಾರ್ ಮಾತನಾಡಿ, ಮನಮೋಹನ್ ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಇದ್ದಾಗಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಣದಲ್ಲಿಡಲಾಗಿತ್ತು. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದುಪ್ಪಟ್ಟು ಮಾಡಿದೆ. ಬೆಲೆ ಏರಿಕೆಯಾಗಿದ್ದರೂ ಬಿಜೆಪಿಯವರು ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ. ಮಹಮದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ಮುಖಂಡರಾದ ತನೋಜ್, ಜೆ. ವಿನಾಯಕ, ರಸೂಲ್‌ಖಾನ್, ಜಗದೀಶ್, ಲಾಕೇಶ್, ರೂಬೆನ್ ಮೊಸಸ್, ಸಿಲ್ವಸ್ಟರ್, ಸುದೀಪ್, ಸುರೇಶ್ ಇದ್ದರು.