ಚಿಕ್ಕಮಗಳೂರು: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿರುವ ಭಯೋತ್ಪಾದನೆ, ಕೋಮು ದಳ್ಳುರಿ, ಮತ- ಮತಗಳ ನಡುವಿನ ಜಗ್ಗಾಟವನ್ನು ನಾವೆಲ್ಲರೂ ಒಗ್ಗಟ್ಟಾಗಿ ಹತ್ತಿಕ್ಕಬೇಕೆಂದು ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಮಂಗಳವಾರ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ ಧ್ವಜಾರೋಹಣ ನಡೆಸಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.
ದೇಶವು ಅನೇಕತೆಯಲ್ಲಿ ಏಕತೆಯನ್ನು ಹೊಂದಿದ್ದು, ಶಾಂತಿ, ಸಹನೆ ನಮ್ಮ ಶಕ್ತಿ. ಸೌಹಾರ್ದತೆ ನಮ್ಮ ಹುಟ್ಟುಗುಣ, ಕೂಡಿ ಬಾಳುವುದು ನಮ್ಮ ಪರಂಪರೆ. ನಮ್ಮ ಸಹಜತೆ, ಸರ್ವಧರ್ಮ, ಸಮಬಾಳು ಎಲ್ಲರೊಳಗೊಂದಾಗುವ ನಮ್ಮತನ, ಸಕಲ ಜೀವಾತ್ಮಗಳನ್ನು ಪ್ರೀತಿಸುವುದು ನಮ್ಮ
ಔದಾರ್ಯ ಈ ನೆಲದ ಶ್ರೇಷ್ಠ ಗುಣವಾಗಿದೆ ಎಂದು ಬಣ್ಣಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತೀಯ ಬಾಂಧವ್ಯದ ಎಳೆಗಳು ಗಟ್ಟಿಗೊಳ್ಳಬೇಕು. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಪಷ್ಟ, ದಿಟ್ಟ ನಿಲುವಿನೊಂದಿಗೆ ಅನೇಕ ಯೋಜನೆಗಳನ್ನು ಕೈಗೊಂಡಿದೆ. ನಾವೆಲ್ಲರೂ ಒಂದೇ ಎಂಬ ಸಾರ್ಥಕ ಕಾರ್ಯ ಮಾಡುತ್ತಿದೆ ಎಂದ ಅವರು, ಜಾಗತಿಕ ಮಟ್ಟದಲ್ಲಿ ಭಾರತೀಯರ ಸಂಸ್ಕೃತಿ, ತತ್ವ- ಸಿದ್ಧಾಂತಗಳಿಗೆ ಮೌಲ್ಯ ಬರುವಂತೆ ಮಾಡುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲುದಾರರಾಗಬೇಕು. ದೇಶ, ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಬೆಳೆಯಬೇಕು. ಭಾರತೀಯರ ಹೃದಯ ಸದಾಭಿಮಾನದ ಗೂಡಾಗಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆ ಹಸಿರಿನಿಂದ ಕಂಗೊಳಿಸುತ್ತಿದ್ದು, ಅತಿವೃಷ್ಟಿ- ಅನಾವೃಷ್ಟಿ ಸೇರಿದಂತೆ ಅನೇಕ ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿದೆ. ಮಲೆನಾಡು, ಬಯಲುಸೀಮೆ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಜಿಲ್ಲೆಯ ಜನಜೀವನವು ಅಷ್ಟೇ ವಿಶಿಷ್ಟವಾಗಿದೆ. ಕರ್ನಾಟಕ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲೆ ಬರೆದ ಹೊಯ್ಸಳ ಸಾಮ್ರಾಜ್ಯದ ಮೂಲನೆಲೆ ಅಂಗಡಿ ಗ್ರಾಮ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು
ಶ್ಲಾಘಿಸಿದರು.
ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಪಂ ಉಪಾಧ್ಯಕ್ಷ ಸೋಮಶೇಖರ್, ಜಿಪಂ ಸದಸ್ಯೆ ಕವಿತಾ ಲಿಂಗರಾಜು, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್, ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್, ಜಿಪಂ ಸಿಇಒ ಎಸ್. ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್, ಎಎಸ್‌ಪಿ ಶೃತಿ, ಉಪ ವಿಭಾಗಾ ಧಿಕಾರಿ ಡಾ| ಎಚ್.ಎಲ್. ನಾಗರಾಜ್ ಮತ್ತಿತರರು ಇದ್ದರು.
ಓದಿ : ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಪಠಿಸಿ