ಚಿಕ್ಕಮಗಳೂರು: ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪ್ರಕೃತಿ ಋಣ ತೀರಿಸದಿದ್ದರೆ ಮುಂದಿನ ಪೀಳಿಗೆ ಬದುಕು ಕಷ್ಟಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಎಂ. ಅಡಿಗ ಹೇಳಿದರು.
ಅರಣ್ಯ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗೃಹ ಮಂಡಳಿ ಬಡಾವಣೆ ನ್ಯಾಯಾಧೀಶರ ವಸತಿಗೃಹದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಮನೆಗೊಂದು ಮಗು ಇಲ್ಲದಿದ್ದರೆ ಮನೆತನ ಮುಂದುವರೆಯುವುದು ಕಷ್ಟ ಎಂಬುದಿತ್ತು. ಆದರೆ, ಈಗ ಹಾಗಿಲ್ಲ. ಮನೆಗೊಬ್ಬರು ಒಂದೊಂದು ಸಸಿ ನೆಡದಿದ್ದರೆ ಮುಂದಿನ ಪೀಳಿಗೆಯ ಬದುಕೇ ಕಷ್ಟ ಎಂದರು. ಮಹಾನಗರ ಪಾಲಿಕೆ ಸೇರಿದಂತೆ ನಗರ ಪ್ರದೇಶಗಳಲ್ಲಿ ಇಂದು ಮಾಲಿನ್ಯ ಹೆಚ್ಚಾಗಿ ಜನರಿಗೆ ಸರಿಯಾಗಿ ಉಸಿರಾಡಲು ಅವಕಾಶ ಆಗುತ್ತಿಲ್ಲ. ಇದರಿಂದ ಶ್ವಾಸಕೋಶದ ತೊಂದರೆ, ಸಾಕಷ್ಟು ರೋಗಗಳಿಗೆ ಒಳಗಾಗುತ್ತಿದ್ದೇವೆ. ಮರ ಬೆಳೆಸದಿರುವುದು, ಬೆಳೆಸಿರುವ ಮರಗಳನ್ನು ಕಡಿಯುತ್ತಿರುವುದೇ ಇದಕ್ಕೆಲ್ಲಾ ಮೂಲ ಕಾರಣ. ಮರಗಿಡಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ ಎಂದರು.
ನೆಟ್ಟಿರುವ ಗಿಡಗಳ ಸಂರಕ್ಷಣೆಗಾಗಿ ಸ್ಥಳೀಯ ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳ ಸಹಕಾರ ಪಡೆಯಲಾಗುವುದು. ನ್ಯಾಯಾಧೀಶರ ವಸತಿಗೃಹ ಆವರಣದಲ್ಲಿ ನೆಟ್ಟಿರುವ ಗಿಡಗಳನ್ನು ಬೆಳೆಸಲು ಅವರೇ ನಿಗಾವಹಿಸುತ್ತಾರೆ. ಜಿಲ್ಲೆಯಾದ್ಯಂತ ಖಾಲಿ ಇರುವ ಸಾರ್ವಜನಿಕ ಪ್ರದೇಶದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯಿಂದ 2 ಕೋಟಿ ಸಸಿ ನೆಟ್ಟು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಉಪಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್. ಕುಮಾರ್ ಮಾತನಾಡಿ, ಟಬುಬಿಯಾ, ನೇರಳೆ, ನೆಲ್ಲಿ, ಗಸಗಸೆ, ಹಲಸು ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲು ಮುಂದಾಗಿದ್ದೇವೆ. ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಪ್ರಕೃತಿಯ ಉಳಿವಿಗಾಗಿ ಉತ್ತಮ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲಾಗುವುದು. ನುಗ್ಗೆ ಮತ್ತು ಕರಿಬೇವಿನ ಗಿಡಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಶಾಲಾ ಆವರಣದಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ ಎಂದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಲ್. ಅಶೋಕ್, ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ, ಕೌಂಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಜಿ.ಟಿ. ದೇವೇಂದ್ರನ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗ್ಡೆ, ನ್ಯಾಯಾಧೀಶರಾದ ಅರುಣಕುಮಾರಿ, ಸಿದ್ದರಾಮಪ್ಪ ಕಲ್ಯಾಣರಾವ್, ಕೆ.ಆರ್. ದೀಪ, ಸಿ.ಎಸ್. ಶರ್ಮಿಳಾ, ಎಸಿಎಫ್ ಮುದ್ದಣ್ಣ, ವಲಯಾರಣ್ಯಾಧಿಕಾರಿ ಎಸ್.ಎಲ್. ಶಿಲ್ಪ, ಡಿಆರ್‌ಎಫ್‌ಓ ವೆಂಕಟೇಶ್, ಸತೀಶ್ ಇತರೆ ಸಿಬ್ಬಂದಿ ಹಾಜರಿದ್ದರು