Advertisement

ನಿಲ್ದಾಣ ಇದೆ; ಬಸ್‌ಗಳೇ ಬರ್ತಿಲ್ಲ!

03:16 PM Oct 30, 2019 | Naveen |

ಮಂಜುನಾಥ ಹಗೇದ್‌
ಚಿಕ್ಕಜಾಜೂರು:
ಗ್ರಾಮದಲ್ಲಿ ಬಸ್‌ ನಿಲ್ದಾಣ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ. ಆದರೆ ನಿಲ್ದಾಣದ ಹತ್ತಿರ ನಿಲ್ಲಬೇಕಾದ ಬಸ್‌ಗಳು ಗ್ರಾಮದ ರಸ್ತೆ ಬದಿಗಳಲ್ಲಿ ನಿಲ್ಲುವುದರಿಂದ ನಿಲ್ದಾಣ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Advertisement

ಸುತ್ತಮುತ್ತಲಿನ 32 ಗ್ರಾಮಗಳಿಗೆ ವ್ಯಾಪಾರ-ವಹಿವಾಟಿಗೆ ಅನುಕೂಲವಾಗಿರುವ ಮಧ್ಯವರ್ತಿ ಸ್ಥಳ ಇದು. ಅಲ್ಲದೆ ರೈಲ್ವೆ ಜಂಕ್ಷನ್‌ ಕೂಡ ಹೊಂದಿದೆ. ಚೆನ್ನೈ, ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗುಂತಕಲ್‌, ಮಂತ್ರಾಲಯ, ವಾರಣಾಸಿಯಂತಹ ಪ್ರಮುಖ ನಗರಗಳಿಗೆ ಇಲ್ಲಿಂದ ಪ್ರಯಾಣಿಸಬಹುದು.

ಸುಮಾರು 5-6 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಬಹಳಷ್ಟು ವರ್ಷಗಳ ಕಾಲ ಬಸ್‌ ನಿಲ್ದಾಣವೇ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದರು. 2012-13ನೇ ಸಾಲಿನಲ್ಲಿ ಸುಮಾರು 6 ಲಕ್ಷ ರೂ. ವ್ಯಯಿಸಿ ನಿರ್ಮಿತಿ ಕೇಂದ್ರ ಮೇಲುಸ್ತುವಾರಿಯಲ್ಲಿ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರೆ ಗ್ರಾಮಕ್ಕೆ ಆಗಮಿಸುವ ಎಲ್ಲಾ ಬಸ್‌ಗಳು ರಸ್ತೆ ಬದಿಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ಇದರಿಂದ ಸಾಕಷ್ಟು ಅಪಘಾತಗಳಾಗಿದ್ದೂ ಉಂಟು.

ದಿನನಿತ್ಯ ಸಾವಿರಾರು ಜನ ಪ್ರಯಾಣಿಕರು ಬಂದು ಹೋಗುವ ಗ್ರಾಮದಲ್ಲಿ ಸರ್ಕಾರಿ ಬಸ್‌ ಸೇರಿದಂತೆ 50 ರಿಂದ 60 ಬಸ್‌ಗಳು ಸಂಚರಿಸುತ್ತವೆ. ಪ್ರಯಾಣಿಕರಿಗೆ ಅನುಕೂಲವಾಗಲೆಂದು ಎರಡು ವ್ಯಾಪಾರ ಮಳಿಗೆಗಳಿರುವ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಬಸ್‌ ನಿಲ್ದಾಣ ಉದ್ಘಾಟನೆಯಾಗಿ ವರ್ಷಗಳೇ ಕಳೆದರೂ ಇದುವರೆಗೂ ಒಂದೂ ಬಸ್‌ ಬಾರದಿರುವುದು ವಿಪರ್ಯಾಸ.

ಪ್ರಯಾಣಿಕರು ಕುಳಿತುಕೊಳ್ಳುವ ಸಿಮೆಂಟ್‌ ಆಸನವನ್ನು ಕಿಡಿಗೇಡಿಗಳು ಒಡೆದು ಹಾಳು ಮಾಡಿದ್ದಾರೆ. ಅಲ್ಲಿಯೇ ಮಲ ಮೂತ್ರ ವಿಸರ್ಜನೆಯನ್ನೂ ಮಾಡುತ್ತಾರೆ. ರಾತ್ರಿಯಾದರೆ ಮದ್ಯಪಾನಿಗಳ ಹಾಗೂ ಹರಟೆ ಪ್ರಿಯರ ಅಡ್ಡೆಯಾಗಿ ಮಾರ್ಪಟ್ಟಿದೆ. ಬಸ್‌ ನಿಲ್ದಾಣದ ಸುತ್ತ ಕೊಳಚೆ ನೀರು ಶೇಖರಣೆ ಆಗುತ್ತಿದ್ದು, ಗಿಡಗಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಬಸ್‌ ನಿಲ್ದಾಣದ ಅಭಿವೃದ್ಧಿಗೆ ಒತ್ತು ನೀಡಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಇಚ್ಛಾಶಕ್ತಿ ತೋರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next