ಕೋಲಾರ: ವಡಗೂರು ಸೊಸೈಟಿಯಲ್ಲಿ ಆಗಿರುವ ಲೋಪ ಸರಿಪಡಿಸಿಕೊಂಡು ಏ.10 ರೊಳಗೆ ಉಳಿಸಿ ಕೊಂಡಿರುವ 2 ವರ್ಷಗಳ ಆಡಿಟ್ ಮುಗಿಸಿ ಮಹಿಳೆ ಯರಿಗೆ ಸಾಲ ನೀಡಿ ಮರ್ಯಾದೆ ಉಳಿಸಿಕೊಳ್ಳಿ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲವನ್ನೂ ನೀಡದೇ, ಇಟ್ಟಿರುವ ಠೇವಣಿ ವಾಪಸ್ಸು ನೀಡದೇ ವಂಚಿಸಲಾಗಿದೆ ಎಂಬ ಮಹಿಳೆಯರ ಆರೋಪದ ಹಿನ್ನೆಲೆ ತಾಲೂಕಿನ ವಡಗೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಚೇರಿಗೆ ಶುಕ್ರವಾರ ಬ್ಯಾಂಕಿನ ನಿರ್ದೇಶಕರೊಂದಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿ ಮಾತನಾಡಿದರು. ಅಸಮಾಧಾನ: 2014ಕ್ಕೆ ಮೊದಲು ನಡೆದಿರುವ ಲೋಪಗಳನ್ನು ಈವರೆಗೂ ಯಾರೂ ಸರಿಪಡಿಸಿಲ್ಲ ಎಂದು ಸೊಸೈಟಿ ಅಧ್ಯಕ್ಷರು ಹೇಳುತ್ತಾರೆ. ಸ್ವಂತ ಬಂಡವಾಳದಲ್ಲಿ ಸಾಲ ನೀಡಿರುವುದಕ್ಕೆ ಸೂಕ್ತ ದಾಖಲೆ ನಿರ್ವಹಿಸಿಲ್ಲ, ಅವಿಭಜಿತ ಜಿಲ್ಲೆಯ 200 ಸೊಸೈಟಿಗಳ ಪೈಕಿ ಆಡಿಟ್ ಆಗದ ಸೊಸೈಟಿ ಇದೊಂದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೊಸೈಟಿಯಲ್ಲಿ ಈವರೆಗೂ ಆಗಿರುವ ಲೋಪಗಳು ಆಡಿಟ್ ವರದಿಯಲ್ಲಿ ತೋರಿಸಿ, ಅದರಂತೆ ಯಾರ್ಯಾರ ಬಳಿ ಸೊಸೈಟಿ ಹಣ ಸೇರಿದೆಯೋ ಅದೆಲ್ಲವನ್ನೂ ಕಟ್ಟಿಸಿ, ಇಲ್ಲವಾದರೆ ಕ್ರಿಮಿನಲ್ ಕೇಸ್ ದಾಖಲಿಸಲು ಕ್ರಮವಹಿಸಿ ಎಂದು ಸಲಹೆ ನೀಡಿದರು. ಕ್ರಿಮಿನಲ್ ಕೇಸ್ ದಾಖಲಿಸಿ: ಆಹಾರ ಮಾರಾಟ ಗಾರರು 7,80,000 ರೂ, ರೈತರು 8,85,000 ರೂ. ಬಾಕಿ ಉಳಿಸಿಕೊಂಡಿದ್ದಾರೆ. ಇದನ್ನು ಕಾಲಮಿತಿ ಯೊಳಗೆ ವಸೂಲಿ ಮಾಡಬೇಕು. ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೊಸೈಟಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿದರು. ಕ್ಯಾಶ್ ಬುಕ್, ಆಹಾರ ಮಾರಾಟ ಪುಸ್ತಕ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ರೈತರಿಗೆ ಸಾಲ ವಿತರಿಸುವ ಬಗ್ಗೆ ಹಾಗೂ ಸಾಲ ಮರುಪಾವತಿ ಪರಿಶೀಲಿಸಿ, ಮಹಿಳಾ ಸಂಘಗಳ ಆರೋಪಕ್ಕೆ ಗುರಿಯಾಗಿರುವ ಸಿಇಒ ವಿಜಯ್ ಕುಮಾರ್ ಕಡೆಯಿಂದ ಮಾಹಿತಿ ಪಡೆದುಕೊಂಡರು.
ತಲೆ ತಗ್ಗಿಸುವಂತಾಗಿದೆ: ಸೊಸೈಟಿ ಅಧ್ಯಕ್ಷ ವಿ.ರಾಮು ಮಾತನಾಡಿ, ತಾನು ಅಧ್ಯಕ್ಷನಾಗುವ ಮುಂದೆ ನಡೆದಿರುವ ಅವ್ಯವಹಾರ ಇದು. ಸೊಸೈಟಿಯಲ್ಲಿ ಹಣ ದುರುಪಯೋಗ ಕುರಿತು ಕ್ರಮ ಕೈಗೊಂಡು ವಸೂಲಿ ಮಾಡಲಾಗುತ್ತಿದೆ ಎಂದರು. ಆದರೂ ಕೆಲವು ಮಂದಿ ವಾಪಸ್ ನೀಡದೇ ಹಠಕ್ಕೆ ಬಿದ್ದಿದ್ದಾರೆ. ಸಾಲಕ್ಕಾಗಿ ಮಹಿಳೆಯರು, ರೈತರು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ ಮಾಡಿದ ತಪ್ಪಿಗೆ ನಾವು ತಲೆತಗ್ಗಿಸುವಂತಾಗಿದೆ ಎಂದು ತಿಳಿಸಿದರು.
ತಪ್ಪು ಸರಿಪಡಿಸಿಕೊಳ್ಳಿ: ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಎಲ್.ಅನಿಲ್‌ಕುಮಾರ್ ಮಾತನಾಡಿ, ಕಡಗಟ್ಟೂರು ಸೊಸೈಟಿ 18 ಹಳ್ಳಿಗಳ ಚಿಕ್ಕ ಸೊಸೈಟಿಯಲ್ಲಿ 30 ಕೋಟಿ ಸಾಲ ನೀಡಿದ್ದಾರೆ. ನಿಮ್ಮದು ದೊಡ್ಡ ಸೊಸೈಟಿ ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿ, ಇಲ್ಲಿನ ಸಿಬ್ಬಂದಿ ಮಾಡುವ ತಪ್ಪಿಗೆ ಈ ವ್ಯಾಪ್ತಿಯ ಮಹಿಳೆಯರು, ರೈತರಿಗೆ ಸಾಲ ಸಿಗದಂತೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಿ, ಇಲ್ಲವೇ ಜನರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಹುತ್ತೂರು ಹೋಬಳಿಯಲ್ಲಿ ರೈತರು ಅನುಸರಿಸುವ ಕೃಷಿ ವಿಧಾನಗಳು ಬೇರೆ ಎಲ್ಲೂ ಇಲ್ಲ. ಈ ರೈತರ ಮಾದರಿ ಜಿಲ್ಲೆಗೆ ಅನ್ವಯ ಇಂತಹ ಸೊಸೈಟಿಯಲ್ಲಿ ಪ್ರಾಮಾಣಿಕವಾಗಿ ಸಾಲ ನೀಡುವುದು ಮತ್ತು ಸಾಲಮರುಪಾವತಿ ಮಾಡುವುದು ನಿಮ್ಮೆಲ್ಲರ ಜವಾಬ್ದಾರಿ ಆಗಬೇಕೆಂದರು. ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಈ ಸೊಸೈಟಿ ಎರಡು ಜಿಲ್ಲೆಗೆ ಮಾದರಿಯಾಗಬೇಕಾಗಿತ್ತು. ಆದರೆ ನೀವೇನು ಮಾಡಿದ್ದೀರಿ, ಎರಡೂ ಜಿಲ್ಲೆಗಳ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿದ್ದೀರಿ, ಇದನ್ನು ಸರಿಪಡಿಸಿಕೊಳ್ಳಿ ಎಂದರು.
ಜನ ಬುದ್ಧಿ ಕಲಿಸುತ್ತಾರೆ: ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಸಿಇಒ ವಿಜಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು ಸರಿಯಾಗಿ ಕೆಲಸ ಮಾಡುವುದನ್ನು ಕಲಿಯಿರಿ. ಇದು ಬಡವರು, ಮಹಿಳೆಯರ ಆರ್ಥಿಕ ಸದೃಢತೆಗೆ ಇರುವ ಜನರ ಸೊಸೈಟಿ. ಯಾರೊಬ್ಬರ ಸ್ವತ್ತಲ್ಲ, ನೀವು ಬದಲಾಗಿ, ಇಲ್ಲದಿದ್ದರೆ ಜನಬುದ್ಧಿ ಕಲಿಸುತ್ತಾರೆಂದರು. ಸಭೆಯಲ್ಲಿ ವಡಗೂರು ಸೊಸೈಟಿ ಉಪಾಧ್ಯಕ್ಷ ಅಂಬರೀಶ್, ನಿರ್ದೇಶಕರಾದ ಸಿ.ವಿ.ನಾರಾಯಣ ಸ್ವಾಮಿ, ರಮೇಶ್, ಸಿಇಒ ವಿಜಯ್ ಕುಮಾರ್, ಮತ್ತಿತರು ಇದ್ದರು.