ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ವೃತ್ತದಲ್ಲಿರುವ ಶಾಫಿಯಾ ಹೋಟಲ್‍ನಲ್ಲಿ ಏಳು ಜೀವಂತ ಉಡಗಳನ್ನು ಅಕ್ರಮವಾಗಿ ಕಬ್ಬಿಣದ ಪಂಜರದಲ್ಲಿಟ್ಟುಕೊಂಡು, ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬೆಂಗಳೂರಿನ ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಗ್ರಾಮದ ಎಸ್.ಇಸ್ಮಾಯಿಲ್ ಜಬೀವುಲ್ಲಾ ಬಿನ್ ಮಿಯನ್ ಸಾಬ್.ಎಸ್, ರಿಜ್ವಾನ್ ಬಿನ್ ಚಾಂದ್ ಭಾಷ ಮತ್ತು ಬಾವಜಾನ್.ಪಿ ಬಿನ್ ಲೇಟ್ ಮೆಹಬೂಬ್ ಬಂಧಿತ ಆರೋಪಿಗಳು.
ಸೀಮಾ ಗರ್ಗ್ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಜಾಗೃತ), ಬೆಂಗಳೂರು ಇವರ ಮಾರ್ಗದರ್ಶನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಬೆಂಗಳೂರು ಜಿ.ಎ.ಗಂಗಾಧರ, ಇವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಅರಣ್ಯ ಅಪರಾಧ ನಿಯಂತ್ರಣ ಕೋಶ (ಜಾಗೃತ) ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೀರೇಶ್ ಗೌಡ, ಪೊಲೀಸ್ ಪಾಟೀಲ್ ಹಾಗೂ ಸಿಬ್ಬಂದಿಗಳು ಮತ್ತು ಬೆಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಹಾಗೂ ಉಪ ಅರಣ್ಯಾಧಿಕಾರಿ ಮಂಜುನಾಥ,ಡಿವೈಆರ್‍ಎಫ್‍ಓ ತನ್ವೀರ್ ಅಹಮದ್, ನಾಗರಾಜು.ಜಿ.ಎಂ, ಕಿರಣ್ ಕುಮಾರ್.ಬಿ.ಜಿ ಹಾಗೂ ಚಾಲಕ ರವಿ.ಎಂ ಇವರುಗಳು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಆರೋಪಿಗಳನ್ನು ದಸ್ತಗಿರಿ ಮಾಡಿ, ಜೀವಂತ ಉಡಗಳನ್ನು ವಶಕ್ಕೆ ಪಡೆದು, ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಮಂಗಳೂರು: ಅನುಮಾನಸ್ಪದ ವರ್ತನೆ: ಓರ್ವ ಪೊಲೀಸರ ವಶಕ್ಕೆ