ಚಿಕ್ಕಬಳ್ಳಾಪುರ: ನವೆಂಬರ್ 19ರಂದು ಚಿತ್ರದುರ್ಗದಿಂದ ತಿರುಪತಿ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಚಿಂತಾಮಣಿ ತಾಲೂಕಿನ ಅಮಿಟಗಾನಹಳ್ಳಿ ಸಮೀಪದ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ 19 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಚಿತ್ರದುರ್ಗದಿಂದ ತಿರುಪತಿ ಕಡೆ ತೆರಳುತ್ತಿದ್ದ ಈ ಬಸ್ಸು ಅಮಿಟಗಾನ ಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾಲುವಿಗೆ ಉರುಳಿದೆ, ಇದರಿಂದಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಅದೃಷ್ಟವಶಾತ್ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಕೂಡಲೇ ಚಿಂತಾಮಣಿ ತಾಲೂಕಿನ ಪೊಲೀಸರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಗಾಯಾಳುಗಳನ್ನು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಂಡಿದ್ದಾರೆ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ರೆಡ್ಡಿ, ವೈದ್ಯರಾದ ಡಾಕ್ಟರ್ ಜಯರಾಮ್ ರೆಡ್ಡಿ ಡಾಕ್ಟರ್ ಮಂಜುಳಾ ಡಾಕ್ಟರ್ ವಾಣಿ ರೆಡ್ಡಿ ಗಾಯಳುಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಗ್ರಾಮಾಂತರ ಸಿಪಿಐ ಸುಧಾಕರ್ ರೆಡ್ಡಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್, ನಾಗೇಂದ್ರ ಪ್ರಸಾದ್ ಮತ್ತು ಸಿಬ್ಬಂದಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವಿಷಯ ತಿಳಿದು ಕೂಡಲೇ ಕ್ಷೇತ್ರದ ಶಾಸಕ ಜೆಕೆ ಕೃಷ್ಣಾ ರೆಡ್ಡಿ ಅವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.