ಚಿಕ್ಕಬಳ್ಳಾಪುರ: ಐಷಾರಾಮಿನ ಜೀವನಕ್ಕಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅಂರ್ತಜಿಲ್ಲಾ ಕಳ್ಳರನ್ನು ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಕುಶಾಂತ್ ಬಿನ್ ನಾರಾಯಣಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ನೆಲಮಾಕನಹಳ್ಳಿಯ ಸಾಗರ್ ಬಿನ್ ರಾಮಚಂದ್ರಪ್ಪ ಬಂಧಿತ ಆರೋಪಿಗಳು.
ಜಿಲ್ಲೆಯ ಶಿಡ್ಲಘಟ್ಟ ನಗರದ ಜೌಗಪೇಟೆಯ ನಿವಾಸಿ ಎಸ್.ರಾಕೇಶ್ ಎಂಬುವವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವು ಆಗಿರುವ ನವೆಂಬರ್ 3ರಂದು ಶಿಡ್ಲಘಟ್ಟ ನಗರ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಡಿವೈಎಸ್ಪಿ ಲಕ್ಷ್ಮಯ್ಯ ಅವರ ಮಾರ್ಗದರ್ಶನದಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಕೆ.ಸತೀಶ್ ಹಾಗೂ ಅಪರಾಧ ಭಾಗದ ಪಿಎಸ್‍ಐ ಪದ್ಮಾವತಮ್ಮ ಮತ್ತು ಸಿಬ್ಬಂದಿ ಒಳಗೊಂಡ ತಂಡ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಿ ಅವರು ನೀಡಿದ ಸುಳಿವಿನ ಮೇರೆಗೆ 4 ಲಕ್ಷ 70 ಸಾವಿರ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನದ ಪ್ರಕರಣದಲ್ಲಿ ಬೆಂಗಳೂರಿನ ನಾಗರಭಾವಿಯ ವಾಸಿ ಮದನ್ ಬಿನ್ ಜಯಕುಮಾರ್ ಪ್ರಮುಖ ಆರೋಪಿಯಾಗಿದ್ದು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದಾನೆ ಎಂದು ಪೋಲೀಸ್ ಇಲಾಖೆಯ ತನಿಖೆಯಿಂದ ಅಂಶ ಹೊರ ಬಂದಿದ್ದು ಈತನನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಆರೋಪಿಗಳಾದ ಕುಶಾಂತ್ ಮತ್ತು ಸಾಗರ್ ಎಂಬುವವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.