ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯ ಡಿ 3 ಕೆಜಿ ಅಕ್ಕಿ ವಿತರಣೆ ಜೊತೆಗೆ ಪಡಿತರದಾರರಿಗೆ ನೀಡುತ್ತಿರಕೆಜಿ ರಾಗಿ ವಿತರಣೆಯಲ್ಲೂ ಕಳಪೆಯ ಕಾರುಬಾರು ಎದ್ದು ಕಾಣುತ್ತಿದ್ದು, ಕಲ್ಲು ಮಿಶ್ರಿತ ರಾಗಿ ಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಸರ್ಕಾರ 10 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿ ಸದ್ಯ 5 ಕೆಜಿ ಅಕ್ಕಿಗೆ ತಗಲುವ ನಗದನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಿ ಉಳಿದ 5 ಕೆಜಿ ಅಕ್ಕಿ ವಿತರಣೆಯಲ್ಲಿ 3 ಕೆಜಿ ಅಕ್ಕಿ, 2 ಕೆಜಿ ರಾಗಿ ವಿತರಿಸುತ್ತಿದೆ. ಆದರೆ ಕಳಪೆ ರಾಗಿ ವಿತರಿಸುತ್ತಿರುವುದು ಜಿಲ್ಲೆಯ ವಿವಿಧ ಕಡೆ ಗಳಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಮೂಲಕ ರೈತರಿಂದ ಖರೀದಿಸಿ ದಾಸ್ತುನು ಮಾಡಿದ್ದ 1.27 ಲಕ್ಷ ಮೆಟ್ರಿಕ್ ರಾಗಿ ವಿತರಣೆ ಮುಗಿದಿರುವುದರಿಂದ ಜಿಲ್ಲೆಗೆ ಪಕ್ಕದ ತುಮಕೂರು ಜಿಲ್ಲೆಯಿಂದ ರಾಗಿ ತರಿಸಿದ್ದು, ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ತೀರಾ ಕಳಪೆ ಗುಣಮಟ್ಟದ ರಾಗಿ ಪೂರೈಕೆ ಆಗಿದ್ದರೆ ಇನ್ನೂ ಕೆಲ ನ್ಯಾಯಬೆಲೆ ಅಂಗಡಿಗಳಿಗೆ ಕಲ್ಲುಮಿಶ್ರಿತ ರಾಗಿ ವಿತರಣೆ ಆಗಿರುವುದು ಗ್ರಾಹಕರನ್ನು ಕಂಗಾಲಾಗುವಂತೆ ಮಾಡಿದೆ.
ಸರ್ಕಾರ ಒಂದು ಕಡೆ ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ಕೊಡದೇ ಕೇವಲ 3 ಕೆಜಿ ಅಕ್ಕಿ ಮಾತ್ರ ವಿತರಿಸಿ ಉಳಿದ 2 ಕೆಜಿ ರಾಗಿ ವಿತರಿಸಿ 5 ಕೆಜಿ ಅಕ್ಕಿಗೆ ಹಣ ಕೊಡುತ್ತಿದೆ. ಜಿಲ್ಲೆಯಲ್ಲಿ ರಾಗಿ ಬೇಡಿಕೆ ಇಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ರೈತರು ರಾಗಿ ಪಡೆಯುತ್ತಿದ್ದಾರೆ. ಆದರೆ ಗುಣಮಟ್ಟ ಇಲ್ಲದ ರಾಗಿ ವಿತರಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲೆಯ ಗ್ರಾಹಕರು, ರೈತ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ರಾಗಿಯಲ್ಲಿ ಮಣ್ಣು ಮಿಶ್ರತವಾಗಿದ್ದು ಸಾಕಷ್ಟು ಕಳಪೆಯಿಂದ ಕೂಡಿದೆ. ಕೂಡಲೇ ರಾಗಿಯನ್ನು ಬದಲಾವಣೆ ಮಾಡಿ ಗುಣಮಟ್ಟದ ರಾಗಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಕ್ರಮ ವಹಿಸಬೇಕು.
●ಶ್ರೀನಿವಾಸ್, ರೈತ ಸಂಘದ ಮುಖಂಡರು ಚಿಂತಾಮಣಿ.
ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗಿದ್ದ 1.27 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಈಗಾಗಲೇ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಿ ಖಾಲಿ ಆಗಿದ್ದು, ಜಿಲ್ಲೆಗೆ ತುಮಕೂರು ಜಿಲ್ಲೆಯಿಂದ ಬಂದಿರುವ ರಾಗಿ ಸ್ವಲ್ಪ ಕಳಪೆಯಿಂದ ಕೂಡಿದೆಂಬ ದೂರುಗಳು ಬಂದ ಬೆನ್ನಲೇ ಪರಿಶೀಲಿಸಲಾಗಿದೆ. ಮುಂದೆ ಆ ರೀತಿ ಆಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.
-ಸವಿತಾ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
-ಕಾಗತಿ ನಾಗರಾಜಪ್ಪ