ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ಬರೋಬ್ಬರಿ ತಿಂಗಳು ಸಮೀಪಿಸುತ್ತಿದೆ. ಆದರೆ ರಾಜಕೀಯ ಪಕ್ಷಗಳ ನಾಯಕರ ಮಧ್ಯೆ ಮಾತ್ರ ಮಾತಿನ ಸಮರ ನಿಲ್ಲದೇ ಮುಂದುವರೆದಿದೆ.
ಹೌದು, ವಿಧಾನಸಭೆ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಬೀಡುಬಿಟ್ಟು ತಮ್ಮ ತಮ್ಮ ಸೋಲಿನ ಬಗ್ಗೆ ಕಾರಣಗಳನ್ನು ಹುಡುಕುತ್ತಿರುವ ಪಕ್ಷಗಳ ನಾಯಕರು, ಈಗ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾರು ನಿರೀಕ್ಷಿಸದ ಫಲಿತಾಂಶ ಹೊರ ಬಿದ್ದು ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿದರೆ, ಜೆಡಿಎಸ್ ಇದೇ ಮೊದಲ ಬಾರಿಗೆ ಕಳೆದ 4 ಬಾರಿ ಚುನಾವಣೆಯಲ್ಲಿ ಪಡೆದ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಕಳಪೆ ಸಾಧನೆ ತೋರಿರುವುದು ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್-ಬಿಜೆಪಿ ಟಾಕ್ ವಾರ್: ಇದರ ಮಧ್ಯೆ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ನಿಂದನೆಯಲ್ಲಿ ತೊಡಗಿ ಕೆಸರೆರೆಚಾಟದಲ್ಲಿ ತೊಡಗಿರುವುದು ಎದ್ದು ಕಾಣುತ್ತಿದೆ. ಮಾಜಿ ಸಚಿವ ಸುಧಾಕರ್ ತಂದೆ ಕೇಶವರೆಡ್ಡಿ ನಮ್ಮ ಸೋಲಿಗೆ ಜೆಡಿಎಸ್ ನಾಯಕರು ಕಾರಣ, ಅವರ ಷಡ್ಯಂತ್ರ ಎಂದು ಆರೋಪಿಸಿದರೆ, ಜೆಡಿಎಸ್ ಅದಕ್ಕೆ ಪ್ರತಿರೋಧವಾಗಿ ಸುಧಾಕರ್ ಅಧಿಕಾರದಲ್ಲಿದ್ದಾಗ ನಮ್ಮ ಕಾರ್ಯಕರ್ತರ ಮೇಲೆ ಹೆಚ್ಚು ಪೊಲೀಸ್ ಕೇಸ್, ರೌಡಿಶೀಟರ್ ಕೇಸ್ ದಾಖಲು ಮಾಡಿಸುತ್ತಿದ್ದರು. ಅದಕ್ಕೆ ಸ್ಥಳೀಯ ಕಾರ್ಯಕರ್ತರು ಸುಧಾಕರ್‌ರನ್ನು ಸೋಲಿಸಲು ಕಾಂಗ್ರೆಸ್‌ಗೆ ಮತ ಹಾಕಿರಬಹುದೆಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡುತ್ತಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಕೂಡ ಸೋತ ಅಭ್ಯರ್ಥಿಗಳು ಸೋಲಿನ ಹುಡುಕಾಟದಲ್ಲಿ ತೊಡಗಿ ಗೆದ್ದ ಅಭ್ಯರ್ಥಿಗಳ ವಿರುದ್ಧ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಚಿಂತಾವಣಿಯಲ್ಲಿ ಜೆಡಿಎಸ್ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕೂಡ ಅಲ್ಪಸಂಖ್ಯಾತರು ನಮ್ಮ ಕೈ ಹಿಡಿಯಲಿಲ್ಲ ಎಂದು ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದಾರೆ.
ಗೌರಿಬಿದನೂರಲ್ಲಿ ಹಣದ ಹೊಳೆ ಹರಿಯಿತು ಎಂದು ಶಾಸಕ ಪುಟ್ಟಸ್ವಾಮಿಗೌಡರ ಗೆಲುವಿನ ಬಗ್ಗೆ ಪರಾಜಿತ ಅಭ್ಯರ್ಥಿ ಎನ್.ಎಚ್. ಶಿವಶಂಕರರೆಡ್ಡಿ ಹೇಳುತ್ತಿದ್ದಾರೆ. ಶಿಡ್ಲಘಟ್ಟದಲ್ಲಿ ನಾಯಕರ ನಡುವೆ ಶೀತಲಸಮರ ತಾರಕಕ್ಕೇರಿದೆ. ಆತ್ಮಾವಲೋಕನ ಸಭೆ ರಣಾಂಗಣವಾಗಿ ಮಾರ್ಪಟ್ಟು ಕೈ ಕಾರ್ಯಕರ್ತರ ನಡುವೆ ಕುರ್ಚಿ ಎಸೆಯುವ ಹಂತಕ್ಕೆ ಗಲಾಟೆ ನಡೆದಿದೆ. ಹೀಗೆ ಜಿಲ್ಲೆಯಲ್ಲಿ ಚುನಾವಣೆ ಮುಗಿದರೂ ಸೋತ, ಗೆದ್ದ ನಾಯಕರ ನಡುವೆ ಮಾತಿನ ಸಮರ ಮುಂದುವರೆದಿವೆ.
ಸುಧಾಕರ್ ವಿರುದ್ಧ ಎಂಟಿಬಿ ನಾಗರಾಜ್ ವಾಗ್ಧಾಳಿ: ಇತ್ತೀಚೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ನನ್ನ ಸೋಲಿಗೆ ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್ ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ. ಅಲ್ಲದೇ ಹೊಸಕೋಟೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ನೇರವಾಗಿ, ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಮೇಲೆ ಬಾಣ ಬಿಟ್ಟು ತಮ್ಮ ಸೋಲಿಗೆ ಸುಧಾಕರ್ ಕಾರಣ ಹಾಗೂ ಬೊಮ್ಮಾಯಿ ಕಾರಣ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಆ ಮೂಲಕ ತಮ್ಮ ಸೋಲಿನ ಬಗ್ಗೆ ಮೌನ ಮುದಿರು ಮಾತನಾಡಿರುವ ಎಂಟಿಬಿ ನಾಗರಾಜ್, ಒಂದು ಕಾಲಕ್ಕೆ ತುಂಬ ಆಪ್ತರಾಗಿದ್ದ ಡಾ.ಕೆ. ಸುಧಾಕರ್ ವಿರುದ್ಧ ಕೆಂಡಮಂಡಲ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.