ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಬರದಿಂದ ಕಂಗೆಟ್ಟಿದ್ದರೂ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 51.41ಲಕ್ಷ ರೂ.ಗಳ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲೂ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ದೇಣಿಗೆ ಸಂಗ್ರಹಿಸಿದಾಗ ಉದಾರವಾಗಿ ಸ್ಪಂದಿಸುವ ಮೂಲಕ ಇತರ ಜಿಲ್ಲೆಗಳಿಗೂ ಮಾದರಿಯಾಗಿದ್ದಾರೆ.
ಶಾಶ್ವತ ಬರಪೀಡಿತ ಜಿಲ್ಲೆಯಿಂದ ನೆರೆ ಪರಿಹಾರಕ್ಕಾಗಿ ಸಂಗ್ರಹವಾದ ಒಟ್ಟು ಹಣ 51.41 ಲಕ್ಷಗಳಾಗಿದ್ದರೆ, ಅದರಲ್ಲಿ ಸಾರ್ವಜನಿಕರು ನೀಡಿರುವ ಹಣವೇ 32.56 ಲಕ್ಷ ರೂ.ಗಳು. ಉಳಿದಂತೆ ಪಂಚಾಯಿತಿಗಳ ಸ್ವಂತ ಆದಾಯದಿಂದ ನೀಡಿದ ಹಣ 17.85 ಲಕ್ಷ ರೂ.ಗಳು.
ನೆರೆ ಪೀಡಿತ ಜನರ ಸಂಕಷ್ಟಕ್ಕೆ ಹೆಗಲು ನೀಡಿದ ಜಿಲ್ಲೆಯ ಜನತೆ ಮಾನವೀಯ ಗುಣಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲಾಡಳಿತ, ನಗರಸಭೆ, ಪುರಸಭೆ, ಪಂಚಾಯಿತಿಗಳ ಜನಪ್ರತಿನಿಧಿಗಳು ಧೇಣಿಗೆ ಸಂಗ್ರಹಕ್ಕೆ ಕೈ ಜೋಡಿಸಿದ್ದು ಈ ಹಣವನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲಾಗುವುದೆಂದು ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಉದಯವಾಣಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್, ಜಿಪಂ ನೂತನ ಸಿಇಒ ಬಿ.ಫೌಜಿಯಾ ತರುನ್ನಮ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.