ಚಿಕ್ಕಬಳ್ಳಾಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಬರೋಬ್ಬರಿ 19 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಬರಗಾಲದ ಸಂದರ್ಭದಲ್ಲಿ ನರೇಗಾ ಕೂಲಿ ಹಣಕ್ಕೆ ಬರ ಎದುರಾಗಿರುವುದು ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ಕಂಗಾಲಾಗಿಸಿದೆ.
ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಅಧಿಕವಾಗಿದ್ದು, ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಹಣ ಕೈ ಸೇರುವುದಿಲ್ಲ ಎಂಬ ಆರೋಪದ ಬೆನ್ನಲೇ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರ ಕೂಲಿ ಹಣ 19 ಕೋಟಿ ಬಾಕಿ ಇರುವುದು ಬೆಳಕಿಗೆ ಬಂದಿದೆ.
ಬರದಿಂದ ತತ್ತರಿಸಿರುವ ಕಾರ್ಮಿಕರು: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆ ಸಮರ್ಪಕವಾಗಿ ಸಕಾಲದಲ್ಲಿ ಬೀಳದೇ ಇಡೀ ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದೆ. ಬರದಿಂದ ಕಂಗೆಟ್ಟಿರುವ ಕೂಲಿ ಕಾರ್ಮಿಕರಿಗೆ ಈಗ ಕೇಂದ್ರ ಸರ್ಕಾರ ನರೇಗಾ ಕೂಲಿ ಹಣ ಪಾವತಿಸದೇ ಇರುವುದು ಕೂಲಿ ಕಾರ್ಮಿಕರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾದ್ಯಂತ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಕಾಮಗಾರಿಗಳು ನಡೆದಿದ್ದು, ವಿಶೇಷವಾಗಿ ಕೆರೆ, ಕುಂಟೆ, ಬದು ನಿರ್ಮಾಣ, ಮಳೆ ಕೊಯ್ಲು, ಜಲ ಮರುಪೂರಣ ಕಾಮಗಾರಿ, ಕಾಲುವೆ ದುರಸ್ತಿ, ಕೃಷಿ ಹೊಂಡ, ಗೋಕುಂಟೆಯತಂಹ ಹಲವು ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಜಿಲ್ಲೆಯ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದ್ದರೂ, ಖಾತ್ರಿ ಯೋಜನೆಯಡಿ ದುಡಿದ ಕೂಲಿ ಕಾರ್ಮಿಕರಿಗೆ ಇನ್ನೂ ಕೂಲಿ ಹಣ ಕೈ ಸೇರದೇ ಇರುವುದು ಕಾರ್ಮಿಕರ ಪರಿಸ್ಥಿತಿ ಒಂದು ರೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಕೂಡ ರಾಜ್ಯಕ್ಕೆ ಕೊಡಬೇಕಾದ ನರೇಗಾ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಇಲ್ಲಿವರೆಗೂ ಕೇಂದ್ರ ಸರ್ಕಾರ ಬಾಕಿ ಹಣ ನೈಯಾಪೈಸೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಜಿಲ್ಲೆಗೆ ಒಟ್ಟು 19 ಕೋಟಿ ಖಾತ್ರಿ ಕೂಲಿ ಹಣ ಕೇಂದ್ರದಿಂದ ಬರಬೇಕಿದ್ದು, ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರು ಖಾತ್ರಿ ಕೂಲಿ ಹಣ ಬಂದಿರಬಹುದೆಂದು ತಮ್ಮ ಖಾತೆ ಇರುವ ಬ್ಯಾಂಕ್‌ಗಳಿಗೆ ಹೋಗಿ ತಮ್ಮ ಉಳಿತಾಯ ಖಾತೆಗಳನ್ನು ಪದೆ ಪದೇ ಪರಿಶೀಲಿಸಿ ಕೂಲಿ ಹಣ ಬಾರದೇ ಬರೀಗೈಯಲ್ಲಿ ಮನೆಗೆ ವಾಪಸ್ ಬರುವಂತಾಗಿದೆ.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳಿದ್ದೇನು?:
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಒಟ್ಟು 19.10 ಕೋಟಿ ರೂ ಕೂಲಿ ಹಣ ಕೇಂದ್ರದಿಂದ ಬರಬೇಕಿದೆ. ಇದು ಜಿಲ್ಲೆಯ ಸಮಸ್ಯೆ ಮಾತ್ರವಲ್ಲ. ರಾಜ್ಯಾದ್ಯಂತ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಬಾಕಿ ಇದೆ. ಸಾಮಗ್ರಿಗಳ ಪೂರೈಕೆ ಬಿಲ್ ಪಾವತಿ ಮಾಡಲಾಗಿದೆ. ಕೂಲಿ ಹಣ ಮಾತ್ರ ಬಾಕಿ ಇದೆ. ಕೇಂದ್ರದಿಂದ ಬಿಡುಗಡೆಗೊಂಡ ತಕ್ಷಣ ಕೂಲಿ ಕಾರ್ಮಿಕರಿಗೆ ಅವರ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮೆ ಆಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಜಿಪಂನ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
-ಕಾಗತಿ ನಾಗರಾಜಪ್ಪ