Advertisement

ಚಿಕ್ಕಬಳ್ಳಾಪುರ: ಬಾಯಾರಿದ “ಬಯಲುಸೀಮೆ’ಗೆ ನೀರಿನದೇ ಚಿಂತೆ

01:07 AM Mar 13, 2019 | Team Udayavani |

 ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆಯ ದೂರದಲ್ಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ, ಹೇಳಿ, ಕೇಳಿ ಬರಪೀಡಿತ ಬಯಲು ಸೀಮೆಯಲ್ಲಿದೆ. ಕಳೆದ 12 ವರ್ಷಗಳ ಪೈಕಿ 10 ವರ್ಷಗಳ ಕಾಲ ಮಳೆ, ಬೆಳೆ ಇಲ್ಲದೆ ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ, ಸದ್ಯ ಲೋಕ ಸಮರದ ಕಾವು ಬೇಸಗೆಯ ಉರಿ ಬಿಸಿಲನ್ನು ಮೀರಿಸುವಂತಿದೆ.

Advertisement

ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾಕರ ಮತಬ್ಯಾಂಕ್‌ನ್ನು ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರ, ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. 1977ರಿಂದ ಈ ವರೆಗೆ ನಡೆದಿರುವ ಒಟ್ಟು 11 ಚುನಾವಣೆಗಳ ಪೈಕಿ ಕಾಂಗ್ರೆಸ್‌ 10 ಬಾರಿ ವಿಜಯದ ಪತಾಕೆ ಹಾರಿಸಿದ್ದರೆ, ಜನತಾದಳ ಒಮ್ಮೆ ಮಾತ್ರ ಗೆದ್ದು ಬೀಗಿದೆ. ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದ ಆರ್‌.ಎಲ್‌.ಜಾಲಪ್ಪ, ಎಂ.ವಿ.ಕೃಷ್ಣಪ್ಪ, ಪ್ರಸನ್ನಕುಮಾರ್‌ ಅವರಂಥ ರಾಜಕೀಯ ದಿಗ್ಗಜರು ಈ ಕ್ಷೇತ್ರದಲ್ಲಿ  ಸಂಸದರಾಗಿದ್ದರು. 

ಕಾಂಗ್ರೆಸ್‌ ಚುನಾವಣ ಅಸ್ತ್ರ
ಜಿಲ್ಲೆಗೆ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ  ಎತ್ತಿನಹೊಳೆ ಯೋಜನೆ ರೂಪಿಸಿ, ಅನುಷ್ಠಾನಗೊಳಿಸುತ್ತಿರುವುದು, ಜಿಲ್ಲೆಯ ಅಂತರ್ಜಲ ವೃದ್ಧಿಗೆ ಕೆರೆಗಳಿಗೆ ನೀರು ತುಂಬಿಸಲು 2,200 ಕೋ. ರೂ. ವೆಚ್ಚದಲ್ಲಿ ಹೆಬ್ಟಾಳ-ನಾಗವಾರ ತ್ಯಾಜ್ಯ ನೀರು ಸಂಸ್ಕರಣ ಯೋಜನೆಗೆ ಚಾಲನೆ ನೀಡಿರುವುದು, ಸಮ್ಮಿಶ್ರ ಸರಕಾರದಲ್ಲಿ ಜಿಲ್ಲೆಗೆ ಮೊಬೈಲ್‌ ಬಿಡಿಭಾಗಗಳ ಘಟಕ ಮಂಜೂರಾತಿ, ಐದು ವರ್ಷಗಳಲ್ಲಿ ಹೊಸ ಜಿಲ್ಲಾಸ್ಪತ್ರೆ, ಎಸ್ಪಿ ಕಚೇರಿ, ಡಿಜಿಟಲ್‌ ಗ್ರಂಥಾಲಯ, ಚಿಕ್ಕಬಳ್ಳಾಪುರ ನಗರಾಭಿವೃದ್ದಿಗೆ ಸಿದ್ದರಾಮಯ್ಯ ಸರಕಾರದಲ್ಲಿ 50 ಕೋ. ರೂ. ವಿಶೇಷ ಅನುದಾನ, ಚಿಕ್ಕಬಳ್ಳಾಪುರದಲ್ಲಿ ಹೊಸ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಉದ್ಘಾಟನೆ, ಯಶವಂತಪುರ-ಚಿಕ್ಕಬಳ್ಳಾಪುರ ನಡುವೆ ಹೊಸ ರೈಲು ಸಂಚಾರ ವಿಸ್ತರಣೆ, ಚಿಕ್ಕಬಳ್ಳಾಪುರದ ಮೂಲಕ ದಿಲ್ಲಿಗೆ ರೈಲು ಸಂಚಾರ ಮತ್ತಿತರ ಸಾಧನೆಗಳೇ ಕಾಂಗ್ರೆಸ್‌ನ ಚುನಾವಣ ಅಸ್ತ್ರಗಳಾಗಿವೆ.

ಬಿಜೆಪಿ ಬತ್ತಳಿಕೆಯಲ್ಲಿನ ಬಾಣಗಳು
ಮೊಲಿ ಮಹಾನ್‌ ಸುಳ್ಳುಗಾರ. ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ 9 ವರ್ಷ ಕಳೆದರೂ ಈ ಭಾಗಕ್ಕೆ ಹನಿ ನೀರನ್ನೂ ತರಲಿಲ್ಲ. ನೀರಾವರಿ ಯೋಜನೆಗಳ ಹೆಸರಿನಲ್ಲಿ ಎರಡು ಬಾರಿ ಜನರನ್ನು ವಂಚಿಸಿದ್ದಾರೆ. ಕೇಂದ್ರದ ಯುಪಿಎ ಸರಕಾರದಲ್ಲಿ ಸಚಿವರಾದರೂ ಜಿಲ್ಲೆಗೆ ಏನನ್ನೂ ಮಾಡಲಿಲ್ಲ. ವಿಶೇಷವಾಗಿ ಜಿಲ್ಲೆಗೆ ಕೃಷಿ ಆಧಾರಿತ ಕೈಗಾರಿಕೆಗಳನ್ನು ತರಲಿಲ್ಲ. ಸಂಸದರು ಬರೀ ಚುನಾವಣೆಯ ಸಂದರ್ಭದಲ್ಲಿ  ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರು ಚುನಾವಣ ಪ್ರಚಾರದ ವೇಳೆ ದೂರುತ್ತಿದ್ದಾರೆ. ಜತೆಗೆ ಮೋದಿ ಅಲೆಯನ್ನು ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ನಂಬಿಕೊಂಡಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ  ಅಲ್ಪಮತಗಳ ಅಂತರದಿಂದ ಸೋತ ಅನುಕಂಪವನ್ನು ಗಿಟ್ಟಿಸಿಕೊಳ್ಳಲು ಈ ಬಾರಿ ಬಿಜೆಪಿ ತಂತ್ರ ರೂಪಿಸಿದೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ ಕಾಂಗ್ರೆಸ್‌ ತೆಕ್ಕೆಯಲ್ಲಿದೆ. ನೆಲಮಂಗಲ ಮತ್ತು ದೇವನಹಳ್ಳಿ ಕ್ಷೇತ್ರಗಳು ದಳದ ಆಧಿಪತ್ಯದಲ್ಲಿದ್ದು, ಬೆಂಗಳೂರು ನಗರ ಜಿಲ್ಲೆಯ ಯಲಹಂಕದಲ್ಲಿ ಕಮಲ ಅರಳಿದೆ.

Advertisement

ಕ್ಷೇತ್ರದಲ್ಲಿ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕಾಮಗಾರಿಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿದ್ದೇನೆ. ಎತ್ತಿನಹೊಳೆ ಮೂಲಕ ಜೂನ್‌ನೊಳಗೆ ಪ್ರಾಯೋಗಿಕವಾಗಿ ನೀರು ಹರಿಸಲಿದ್ದೇವೆ. ಜಿಲ್ಲೆಯ 65 ಕೆರೆಗಳಿಗೆ ನೀರು ತುಂಬಿಸಲು ಎಚ್‌ಎನ್‌ ವ್ಯಾಲಿ ಯೋಜನೆಯನ್ನು 2,200 ಕೋ. ರೂ. ವೆಚ್ಚದಲ್ಲಿ ಅನುಷ್ಠಾನ ಗೊಳಿಸುತ್ತಿದ್ದೇವೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ.
– ಎಂ.ವೀರಪ್ಪ ಮೊಯಿಲಿ, ಸಂಸದ

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next