Advertisement

Chikkaballapur: ಸರ್ಕಾರಿ ಮಹಿಳಾ ಕಾಲೇಜು ಕಟ್ಟಡಕ್ಕೆ ಜಲ ಕಂಟಕ!

01:22 PM Nov 08, 2023 | Team Udayavani |

ಚಿಕ್ಕಬಳ್ಳಾಪುರ: ದಶಕಗಳ ಕಾಲ ಕಾಮಗಾರಿ ಕುಂಟುತ್ತಾ ಸಾಗಿ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿಗಳಿಗೆ ಗುರಿಯಾಗಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಜಿಲ್ಲಾ ಕೇಂದ್ರದ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಮತ್ತೆ ಮಳೆ ನೀರಿನ ಕಂಟಕ ಎದುರಾಗಿದೆ.

Advertisement

ಹೌದು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಮಳೆ ನೀರು ಕಾಲೇಜು ಹೊರಾಂಗಣ ಹಾಗೂ ಕಾಲೇಜು ಕಟ್ಟಡ ಸುತ್ತಲೂ ನಿಂತಿದ್ದು, ಅಕ್ಷರಶಃ ಮಹಿಳಾ ಕಾಲೇಜು ಕಟ್ಟಡ ಆವರಣ ಕೆರೆಯಂತಾಗಿ ಆಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಕಟ್ಟಡ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ.

ದಶಕದ ಹಿಂದೆ ಜಿಲ್ಲಾಡಳಿತ ಮೈ ಮರೆತು ದೂರದೃಷ್ಠಿ ಕಳೆದುಕೊಂಡು ಹಿಂದೆ ಮುಂದೆ ನೋಡದೇ ಆತುರದ ನಿರ್ಧಾರದಿಂದ ಅವೈಜ್ಞಾನಿಕವಾಗಿ ಕೆರೆಯಂಗಳದಲ್ಲಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಮಾಡಿರುವ ಪರಿಣಾಮ ಈಗ ಮಳೆ ಬಿದ್ದರೆ ಸಾಕು, ಕಾಲೇಜು ಆವರಣದಲ್ಲಿ ಮಳೆ ನೀರು ನಿಲ್ಲುವ ದುಸ್ಥಿತಿಯಿಂದ ಕಾಲೇಜು ವಿದ್ಯಾರ್ಥಿಗಳು, ಆಧ್ಯಾಪಕರು ಇನ್ನಿಲ್ಲದ ಪಡಿಪಾಟಲು ಅನುಭವಿಸುವಂತಾಗಿದೆ.

ನೀರು ನಿಲ್ಲದಂತೆ ಕ್ರಮವಹಿಸಿ: ಜಿಲ್ಲೆಯಲ್ಲಿ ಬರೋಬ್ಬರಿ 8 ತಿಂಗಳಿಂದ ಸಮರ್ಪಕವಾಗಿ ಮಳೆ ಆಗಿಲ್ಲ. ಹೀಗಾಗಿ ಕಾಲೇಜು ಉದ್ಘಾಟನೆ ಬಳಿಕ ಸಮಸ್ಯೆ ಕಾಣಲಿಲ್ಲ. ಆದರೆ ಒಂದರೆಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಕೃಪೆ ತೋರಿದ್ದು , ಜೋರು ಮಳೆ ಬಿದ್ದ ಕಾರಣ ಮಹಿಳಾ ಕಾಲೇಜು ಮಳೆ ನೀರಿನಲ್ಲಿ ಮುಳುಗುವಂತಾಗಿದೆ.

ಈ ಮೊದಲು ಮಹಿಳಾ ಪದವಿ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗುವ ಮೊದಲು ನಗರದ ಸಿಟಿಜನ್‌ ಕ್ಲಬ್‌ನಲ್ಲಿ ತಾತ್ಕಲಿಕವಾಗಿ ತರಗತಿಗಳು ನಡೆಯುತ್ತಿದ್ದವು. ಅಲ್ಲಿ ಮೂಲ ಸೌಕರ್ಯಗಳ ಕೊರತೆ ಜೊತೆಗೆ ವಿದ್ಯಾರ್ಥಿಗಳಿಗೆ ಗಾಳಿ, ಬೆಳಕು ಇರಲಿಲ್ಲ. ವಿದ್ಯಾರ್ಥಿಗಳ ಹೋರಾಟ, ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯ ಪ್ರವೇಶದಿಂದ ಕಾಲೇಜ್‌ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಖುಷಿಯಲ್ಲಿ ವಿದ್ಯಾರ್ಥಿಗಳು ಇದ್ದರು. ಆದರೆ, ಈಗ ಮಳೆ ವಿದ್ಯಾರ್ಥಿಗಳ ಸಂತಸ ಕಸಿದುಕೊಂಡಿದ್ದು ನವೆಂಬರ್‌, ಡಿಸೆಂಬರ್‌ ನಲ್ಲಿ ಹಿಂಗಾರು ಮಳೆ ಜೋರಾದರೆ ಕಾಲೇಜು ಸುತ್ತಲೂ ಮಳೆ ನೀರು ಹೆಚ್ಚು ನಿಲ್ಲುವುದು ಗ್ಯಾರೆಂಟಿ ಆಗಿದ್ದು ಕೂಡಲೇ ಜಿಲ್ಲಾಡಳಿತ ಹಾಗೂ ಇದರ ಗಮನ ಹರಿಸಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸಬೇಕಿದೆ.

Advertisement

ವಾಲಿಬಾಲ್‌ ಕ್ರೀಡಾಕೂಟ ಸಳಾಂತ್ಥರ : ಕಾಲೇಜು ಹೊರಾಂಗಣದಲ್ಲಿ ವ್ಯಾಪಕವಾಗಿ ಮಳೆ ನೀರು ನಿಂತು ಪರಿಣಾಮ ಮಂಗಳವಾರ ಕಾಲೇಜಿನಲ್ಲಿ ನಡೆಯಬೇಕಿದ್ದ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ವಾಲಿಬಾಲ್‌ ತಂಡದ ಆಯ್ಕೆ ಪ್ರಕ್ರಿಯೆಯನ್ನು ನಗರ ಹೊರವಲಯ ಸಿವಿವಿ ಕ್ಯಾಂಪಸ್‌ಗೆ ಸ್ಥಳಾಂತರ ಮಾಡಬೇಕಾಯಿತು. ದಿಢೀರ್‌ ಬದಲಾವಣೆಯಿಂದಾಗಿ ಹೊರಗಿನಿಂದ ಬಂದಿದ್ದ ಬೇರೆ ಬೇರೆ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದ್ದು ಎದ್ದು ಕಾಣುತ್ತಿತ್ತು.

ಕಾಲೇಜು ಪ್ರಾಂಶುಪಾಲರು ಹೇಳಿದ್ದು ಏನು?: ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಸರ್ಕಾರಿ ಮಹಿಳಾ ಕಾಲೇಜನ್ನು ರೂಪಿಸಲು ಸಂಕಲ್ಪ ಮಾಡಲಾಗಿದೆ. ಇತ್ತೀಚೆಗಷ್ಟೇ ಇಲ್ಲಿ ತರಗತಿಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಖುಷಿಯಿಂದ ಕಲಿಕೆಯಲ್ಲಿ ತೊಡಗಿದ್ದಾರೆ. ಆದರೆ ರಾತ್ರಿ ಪೂರಾ ಮಳೆ ಸುರಿದ ಪರಿಣಾಮ ಹೊರಾವರಣದಲ್ಲಿ ಸಾಕಷ್ಟು ನೀರು ನಿಂತಿದೆ. ಶೀಘ್ರದಲ್ಲಿಯೇ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ಚಂದ್ರಯ್ಯ ಹೇಳಿದರು.

ಕೆಆರ್‌ಐಡಿಎಲ್‌ ನಿರ್ಮಿಸಿರುವ ಕಾಲೇಜು: ಮಹಿಳಾ ಕಾಲೇಜ್‌ನ್ನು ಕೆಆರ್‌ಐಡಿಲ್‌ ನಿರ್ಮಿಸಿದ್ದು ಸಾಕಷ್ಟು ಭ್ರಷ್ಟಾಚಾರ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಮಾಜಿ ಸಚಿವರಾದ ಶಾಸಕ ತನ್ವೀರ್‌ ಸೇs… ನೇತೃತ್ವದ ವಿಧಾನಸಭೆಯ ಸಾರ್ವಜನಿಕ ಉದ್ದಿಮೆಗಳ ಸಮಿತಿ ತಂಡ ಭೇಟಿ ನೀಡಿ ಕಾಲೇಜಿನ ಕಟ್ಟಡ ನಿರ್ಮಾಣದ ಬಗ್ಗೆ ಇಂಚಿಂದು ಮಾಹಿತಿ ಪಡೆದು ಹೋಗಿತ್ತು. ಅಲ್ಲದೇ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚಿಸಿತ್ತು. ಆದರೂ ಕೋಟಿ ಕೋಟಿ ವೆಚ್ಚ ಮಾಡಿರುವ ಕಾಲೇಜಿನ ಆವರಣದಲ್ಲಿ ಮಳೆ ನೀರು ಸಾರಾಗವಾಗಿ ಹರಿಯದೇ ಕೆರೆಯಂತಾಗಿ ಸಾರ್ವಜನಿಕರ ಟೀಕೆ ಜೊತೆಗೆ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next