ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಆರಂಭಿಸಲಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸಿ 15 ವರ್ಷ ಕಳೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಸ್ವರೂಪವೇ ಬದಲಾಗಿದೆ.
ಕ್ರಾಂತಿಕಾರಿ ಬದಲಾವಣೆ: ನಗರದ ಪ್ರದೇಶ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಬೇಕು. ಕೂಲಿ ಅಥವಾ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಮುಖ್ಯ ಉದ್ದೇಶದಿಂದ ಫೆ.02 2006 ರಂದು ಅಂದಿನ ಪ್ರಧಾನ ಮಂತ್ರಿ ಡಾ.ಮನಮೋಹನ್‌ಸಿಂಗ್ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ದರು. ತದನಂತರ ಅದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾಗಿ ಪರಿವರ್ತನೆಗೊಂಡು ಕೇವಲ ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ.
ವರದಾನ: ಸತತ ಬರಗಾಲದಿಂದ ತತ್ತರಿಸುತ್ತಿರುವ ಮತ್ತು ಯಾವುದೇ ನದಿನಾಲೆಗಳಿಲ್ಲದೆ ನೀರಾವರಿ ಸೌಲಭ್ಯಗಳಿಂದ ವಂಚಿತಗೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಜಿನರೇಗಾ ಯೋಜನೆ ಒಂದು ರೀತಿಯ ವರದಾನವಾಗಿದೆ ಎಂದರೇ ತಪ್ಪಾಗಲಾರದು.
ಜಿಲ್ಲೆಯಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರಲ್ಲದೇ ಜ್ವಲಂತ ಸಮಸ್ಯೆಗಳಾದ ಜಲಮೂಲಗಳನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಯಿತು. ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಬಹುಕಮಾನ್ ಚೆಕ್ ಡ್ಯಾಂಗಳು, ಕಾಲುವೆಗಳ ಪುನಶ್ಚೇತನ. ಸರ್ಕಾರಿ ಕಚೇರಿಗಳು(ಗ್ರಾಮ ಪಂಚಾಯಿತಿ-ಸರ್ಕಾರಿ ಶಾಲೆಗಳು ಸಹಿತ) ಮಳೆ ನೀರು ಕೊಯ್ಲು, ಕೆರೆಗಳ ಪುನಶ್ಚೇತನ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಮತ್ತು ಉದ್ಯಾನವನ ನಿರ್ಮಾಣ, ಆಹಾರ ಸಾಮಗ್ರಿಗಳನ್ನು ಸಂರಕ್ಷಣೆ ಮಾಡಲು ಗೋದಾಮುಗಳು, ಮಾದರಿ ಸರ್ಕಾರಿ ಶಾಲೆ-ಅಂಗನವಾಡಿ ಕೇಂದ್ರಗಳ ನಿರ್ಮಾಣ ಮತ್ತು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ರಾಜೀವ್‌ಗಾಂಧಿ ಸೇವಾ ಕೇಂದ್ರಗಳ ಕಟ್ಟಡಗಳು ತಲೆಎತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ ಮಹತ್ತರ ಬದಲಾವಣೆಯಾಗಿದೆ.
ಇದನ್ನೂ ಓದಿ :ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಖ್ಯಾತ ಪಾಪ್ ತಾರೆ ರಿಹಾನಾ v/s ಕಂಗನಾ ?
ನರೇಗಾ ಯೋಜನೆ ಮೂಲಕ ರೈತರಿಗೆ ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಕಲ್ಯಾಣಿಗಳ ಸcತ್ಛತೆ, ಕುಂಟೆಗಳ ಅಭಿವೃದ್ಧಿ, ಬಚ್ಚಲು ನೀರಿಗಾಗಿ ಸೋಕ್‌ಟ್, ಪಪ್ಪಾಯ, ಬಾಳೆತೋಟ-ಗುಲಾಬಿತೋಟ ಅಭಿವೃದ್ಧಿ ಸಹಿತ ಇನ್ನೂ ಅನೇಕ ವಿಧವಾದ ಸೌಲಭ್ಯಗಳನ್ನು ಈ ಯೋಜನೆಯಡಿ ರೈತರಿಗೆ ನೀಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಜಿನರೇಗಾ ಯೋಜನೆ ಮೂಲಕ ಮೌನಕ್ರಾಂತಿ ಆಗಿದೆಯೆಂದರೇ ತಪ್ಪಾಗಲಾರದು.