ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಸ್ಪಪಕ್ಷೀಯ 13 ಮಂದಿ ಶಾಸಕರೇ ಕಾರಣವಾಗಿದ್ದು ಈಗ ಇತಿಹಾಸ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅತೃಪ್ತ ಶಾಸಕರು ಅನರ್ಹಗೊಳ್ಳುವ ಅಥವಾ ಸಲ್ಲಿಕೆಯಾಗಿರುವ ರಾಜೀನಾಮೆ ಅಂಗೀಕಾರವಾಗಿ ತೆರವಾಗುವ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯ ಲೆಕ್ಕಾಚಾರ ಚಿಕ್ಕಬಳ್ಳಾಪುರ ಕ್ಷೇತ್ರದ ಮಟ್ಟಿಗೆ ತಾರಕಕ್ಕೇರಿದೆ.
ಉಪ ಚುನಾವಣೆಯ ಕರಿನೆರಳು: ಸದ್ಯದ ರಾಜ್ಯ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅತೃಪ್ತ ಶಾಸಕರ ಕ್ಷೇತ್ರಗಳಲ್ಲಿ ಮತ್ತೆ ಉಪ ಚುನಾವಣೆಯ ಕರಿನೆರಳು ಆವರಿಸಿದಂತೆ ಕಂಡು ಬರುತ್ತಿದೆ.
ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಉಪ ಚುನಾವಣೆ ಎದುರಾಗುವುದು ಬಹುತೇಕ ಖಚಿತವಾಗಿದ್ದು, ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆದ ಒಂದೂವರೆ ವರ್ಷಕ್ಕೆ ಕ್ಷೇತ್ರ ಮತ್ತೆ ಉಪ ಚುನಾವಣೆಗೆ ಅಣಿಯಾಗಲಿದೆ.
ಉಪ ಚುನಾವಣೆ ನಡೆದರೆ ಅಭ್ಯರ್ಥಿಗಳಾಗಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೆ ಕೆಲವರು ಪಕ್ಷದ ಟಿಕೆಟ್ ನನಗೆ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಪರ್ಯಾಟನೆಗೆ ಸಜ್ಜಾಗುತ್ತಿರುವುದು ಕಂಡು ಬರುತ್ತಿದೆ. ಇನ್ನು ಕೆಲವರು ಉಪ ಚುನಾವಣೆ ನಡೆದರೆ ತಮ್ಮ ಅದೃಷ್ಟ ಬದಲಾಗಬಹುದೆಂದು ಕ್ಷೇತ್ರದ ಮಾಜಿ ಶಾಸಕರು ಸದ್ದಿಲ್ಲದೇ ಚುನಾವಣಾ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
Advertisement
ಸುಧಾಕರ್ ಕೊನೆಯವರು: ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಕೂಡ ಒಬ್ಬರು ಹಾಗೂ ಕೊನೆಯವರು. ಅದರಲ್ಲೂ ಸುಧಾಕರ್ ರಾಜೀನಾಮೆ ಪ್ರಹಸನ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಸಾಕಷ್ಟು ಹೈಡ್ರಾಮಗಳಿಗೆ ಸಾಕ್ಷಿಯಾಗಿದ್ದನ್ನು ಯಾರು ಮರೆಯುವಂತಿಲ್ಲ. ಸದ್ಯ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿಗೆ 19 ದಿನಗಳಾಗಿದ್ದು, ಇನ್ನೂ ಅಂಗೀಕಾರವಾಗಲಿ ಅಥವಾ ತಿರಸ್ಕೃತವಾಗಲಿ ಮಾಡಿಲ್ಲ.
Related Articles
Advertisement
ಯಾವ ಪಕ್ಷದಲ್ಲಿ ಯಾರು ಆಕಾಂಕ್ಷಿಗಳು ?: ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ಕಾಂಗ್ರೆಸ್‌ನಿಂದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದ ಸದ್ಯ ಜೆಡಿಎಸ್‌ನಲ್ಲಿರುವ ನಂದಿ ಆಂಜಿನಪ್ಪ, ಈ ಹಿಂದೆ ಲೋಕಸಭೆ, ವಿಧಾನಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ರಾಜ್ಯ ಖಾದಿ ಮತ್ತು ಗ್ರಾಮೋದೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ವಿ.ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಮಾಜಿ ಸಂಸದರಾದ ಆರ್.ಎಲ್.ಜಾಲಪ್ಪರವರ ಭಾವಮೈದನ ಜಿ.ಎಚ್.ನಾಗರಾಜ್‌ರ ಪುತ್ರ ವಿನಯ್ ಶರ್ಮ ಅಭ್ಯರ್ಥಿಗಳಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಅಲ್ಲದೇ ಬೆಂಗಳೂರಿನ ಕೆಲ ಉದ್ಯಮಿಗಳು ಸಹ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಆಪ್ತರೊಬ್ಬರು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಆಗುವ ಸಾಧ್ಯತೆ ಇದೆಯೆಂಬ ಮಾತು ಕೇಳಿ ಬರುತ್ತಿದೆ.
ಇನ್ನೂ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹೆಸರು ಕೇಳಿ ಬರುತ್ತಿದೆ. ಆದರೆ ಸುಧಾಕರ್ ಬಿಜೆಪಿ ಹೊಸ್ತಿಲ್ಲಲಿರುವುದರಿಂದ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಅನುಮಾನವಾಗಿದೆ.
ಜೆಡಿಎಸ್‌ನಲ್ಲಿ ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಲ್ಲಿ ಶಾಸಕ ಸುಧಾಕರ್ ಅನರ್ಹಗೊಳ್ಳದೇ ಹೋದರೆ ಸುಧಾಕರ್ ಸ್ಪರ್ಧಿಸುವುದು ಖಚಿತ. ಒಂದು ವೇಳೆ ಅನರ್ಹಗೊಂಡರೆ ಅವರ ಪತ್ನಿ ಡಾ.ಪ್ರೀತಿ ಸುಧಾಕರ್, ಅವರು ತಪ್ಪಿದರೆ ಸುಧಾಕರ್ ಅವರ ತಂದೆ ಪಿ.ಎನ್.ಕೇಶವರೆಡ್ಡಿ ಅವರನ್ನು ಕಣಕ್ಕೆ ಇಳಿಸಿದರೆ ಆಶ್ಚರ್ಯ ಪಡಬೇಕಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಕಳೆದ ಬಾರಿ ಸುಧಾಕರ್‌ಗೆ ಐತಿಹಾಸಿಕ ಗೆಲುವು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಶಾಸಕ ಸತತ ಎರಡನೇ ಬಾರಿ ಗೆಲ್ಲುವುದಿಲ್ಲ ಎಂಬ ಇತಿಹಾಸ ದಶಕಗಳಿಂದಲೂ ಇದೆ. ಆದರೆ 2013 ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಡಾ.ಕೆ.ಸುಧಾಕರ್, 2018ರ ವಿಧಾನಸಭಾ ಚುನಾವಣೆಯಲ್ಲೂ ಸಹ ತಮ್ಮ ಪ್ರಬಲ ವಿರೋಧ ಪಕ್ಷವಾದ ಜೆಡಿಎಸ್‌ನ್ನು ಮೆಟ್ಟಿ ಜತೆಗೆ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಕ್ಷೇತ್ರದಲ್ಲಿನ 70 ವರ್ಷಗಳ ರಾಜಕೀಯ ಇತಿಹಾಸವನ್ನು ಅಳಿಸಿ ಹಾಕಿದ್ದರು.
ಎರಡನೇ ಬಾರಿಗೆ ಪುನರಾಯ್ಕೆಗೊಳ್ಳುವ ಮೂಲಕ ಕ್ಷೇತ್ರದ ರಾಜಕಾರಣದಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿ ಮೂರನೇ ಬಾರಿಗೆ ಡಾ.ಕೆ.ಸುಧಾಕರ್ ಬಿಜೆಪಿಯಿಂದ ಸ್ಪರ್ಧಿಸಬೇಕಿದ್ದು, ಒಂದು ವೇಳೆ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಅನರ್ಹಗೊಳಿಸಿದರೆ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗುವ ಸಾಧ್ಯತೆಯನ್ನು ಸದ್ಯ ಪರಿಸ್ಥಿತಿಯಲ್ಲಿ ತಳ್ಳಿ ಹಾಕುವಂತಿಲ್ಲ.
ಕಳೆದ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ:
ಕಳೆದ 2018ರ ಮೇ 12 ರಂದು ನಡೆದ ಸಾರ್ವತ್ರಿಕ ಚುನಾವನೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಸಕ ಡಾ.ಕೆ.ಸುಧಾಕರ್ ತಮ್ಮ ಪ್ರತಿ ಸ್ಪರ್ಧಿ ಜೆಡಿಎಸ್ ಕೆ.ಪಿ.ಬಚ್ಚೇಗೌಡರ ವಿರುದ್ಧ 30,431 ಮತಗಳ ಭಾರೀ ಅಂತರದಿಂದ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು. ಸುಧಾಕರ್ ಅಂಚೆ ಮತ (478), ಇವಿಎಂ (81,528), ಮತಗಳು ಸೇರಿ ಒಟ್ಟು 82,006 ಮತ ಪಡೆದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಕೆ.ಪಿ.ಬಚ್ಚೇಗೌಡ ಅಂಚೆ ಮತ (313), ಇವಿಎಂ ಮತ (51,262) ಸೇರಿ ಒಟ್ಟು 51,575 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ವಿ.ನವೀನ್ ಕಿರಣ್ ಅಂಚೆ ಮತ (549) ಇವಿಎಂ ಮತ (28,884) ಸೇರಿ ಒಟ್ಟು 29,433 ಮತ ಪಡೆದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಬಿಜೆಪಿ ಅಭ್ಯರ್ಥಿ ಡಾ.ಜಿ..ಮಂಜುನಾಥ, ಅಂಚೆ ಮತ (48) ಹಾಗೂ ಇವಿಎಂ ಮತ (5,528) ಸೇರಿ ಒಟ್ಟು 5,576 ಮತ ಪಡೆದಿದ್ದರು.
ಸ್ಪೀಕರ್ ನಿರ್ಣಯದತ್ತ ಸುಧಾಕರ್ ಬೆಂಬಲಿಗರ ಚಿತ್ತ:
ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್, ಜೆಡಿಎಸ್ ನಾಯಕರು ಆಕ್ರೋಶಗೊಂಡಿದ್ದು, ಯಾವುದೇ ಕಾರಣಕ್ಕೂ ಮತ್ತೆ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಅನಿಶ್ಚಿತತೆಯ ನಡುವೆ ಪಕ್ಷ ವಿರೋಧಿ ಚಟುವಟಿಕೆ ಆಧಾರದಲ್ಲಿ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಕಾಂಗ್ರೆಸ್ ಜೊತೆ ವಿಲೀನವಾಗಿದ್ದ ಆರ್.ಶಂಕರರನ್ನು ಸ್ಪೀಕರ್ ರಮೇಶ್ ಕುಮಾರ್ ಶಾಸಕ ಸ್ಥಾನದಿಂದ ಅರ್ನಹಗೊಳಿಸಿದ್ದಾರೆ. ಆದರೆ 8 ಮಂದಿ ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ಅಂತಿಮ ತೀರ್ಪು ನೀಡಿಲ್ಲ. ಹೀಗಾಗಿ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಆದರೆ ಬಲ್ಲಮೂಲಗಳ ಪ್ರಕಾರ ಶಾಸಕ ಡಾ.ಕೆ.ಸುಧಾಕರ್ ಸಹ ಅನರ್ಹಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
● ಕಾಗತಿ ನಾಗರಾಜಪ್ಪ