Advertisement

ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಾತಿನಿಧ್ಯ ನೀಡಲು ಆಗ್ರಹ

03:01 PM Nov 16, 2021 | Team Udayavani |

ಚಿಕ್ಕಬಳ್ಳಾಪುರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಚುನಾವಣೆಗೆ ಈಗಾಗಲೇ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ. ನ.16ರಂದು ಅಧಿ ಸೂಚನೆ ಹೊರಡಿಸಲಿದೆ.

Advertisement

ಈ ನಡುವೆ ಪರಿಷತ್‌ನ ಚುನಾವಣೆಗೆ ಕಾಂಗ್ರೆಸ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹ ಕೇಳಿ ಬರುತ್ತಿದ್ದು, ಪಕ್ಷದ ವರಿಷ್ಠರಿಗೆ ಹೊಸ ಸವಾಲು ಆಗಿ ಪರಿಣಮಿಸಿದೆ. ಅಖಂಡ ಕೋಲಾರದಿಂದ ವಿಭಜನೆಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷ ಕಳೆದ್ರೂಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಕ್ತ ರೀತಿಯ ಪ್ರಾತಿನಿಧ್ಯ ದೊರೆಯಲಿಲ್ಲ ಎಂಬ ಅಸಮಾಧಾನ ಕೇಳಿ ಬಂದಿದೆ. ಈ ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿರುವ ವಿಧಾನ ಪರಿಷತ್‌ನ ಚುನಾವಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯವರಿಗೆ ಅವಕಾಶ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಜಿಲ್ಲೆಗೆ ಪ್ರಾತಿನಿಧ್ಯ ನೀಡಿ: ಪ್ರಸ್ತುತ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ವೈ.ನಂಜೇಗೌಡ ಅವರು ಕೋಚಿಮುಲ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮತ್ತೂಂದೆಡೆ ಡಿಸಿಸಿ ಬ್ಯಾಂಕಿಗೆ ಕೋಲಾರ ಜಿಲ್ಲೆಯವರೇ ಆದ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಈ ಹಿಂದೆಯೂ ಜಿಲ್ಲೆಯ ಕೆಜಿಎಫ್‌ನ ನಸೀರ್‌ ಅಹಮದ್‌ ಅವರು ವಿಧಾನ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ರೀತಿಯ ಸ್ಥಾನಮಾನ ಸಿಕ್ಕಿಲ್ಲ. ಈ ಬಾರಿಯ ಎಂಎಲ್‌ಸಿ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕೆಂದು ವರಿಷ್ಠರಿಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಮನವಿ ಮಾಡಿದ್ದಾರೆ.

ವರಿಷ್ಠರಿಗೆ ಅಭ್ಯರ್ಥಿ ಆಯ್ಕೆ ಸವಾಲು: ಅಖಂಡ ಕೋಲಾರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷ ಕಳೆದ ಬಳಿಕ ಇತ್ತೀಚಿಗೆ ರಾಜ್ಯ ಸಚಿವ ಸಂಪುಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚಿಸಲು ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.

Advertisement

ಈ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿ ಡಿಸಿಸಿ ಬ್ಯಾಂಕ್‌ ಸಹ ಸ್ಥಾಪಿಸಲು ಪ್ರಯತ್ನ ಮುಂದು ವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್‌ನ ಚುನಾವಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯವರಿಗೆ ಅವಕಾಶ ಕಲ್ಪಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಬೇಕೆಂದು ಬೇಡಿಕೆ ಸಲ್ಲಿಸಲಾಗಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರಿಗೆ ಅಭ್ಯರ್ಥಿ ಆಯ್ಕೆ ಹೊಸ ಸವಾಲಾಗಿದೆ.

ಕಾಂಗ್ರೆಸ್‌ ಟಿಕೆಟ್‌ ರೇಸಲ್ಲಿ ಯಾರಿದ್ದಾರೆ?:

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಈಗಾಗಲೇ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಪಿ.ಎನ್‌.ಮುನೇಗೌಡ, ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷಕೇಶವರೆಡ್ಡಿ ಮತ್ತು ಚೇತನಗೌಡ ಎಂಬುವರು ಸ್ಥಳೀಯ ಸಂಸ್ಥೆಗಳಿಂದ ವಿಧಾನ  ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ಅವಕಾಶ ಕಲ್ಪಿಸಬೇಕೆಂದುಕೆಪಿಸಿಸಿಯಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಪಕ್ಷದಲ್ಲಿ ನಿಷ್ಠೆಯಿಂದಕಾರ್ಯ ನಿರ್ವಹಿಸುತ್ತಿರುವ ತಮಗೆ ಅವಕಾಶ ಕಲ್ಪಿಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಮುನೇಗೌಡ ಮತ್ತು ಕೇಶವರೆಡ್ಡಿ ಅವರು ಬಲವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ ಜೊತೆಗೆ ಜಿಲ್ಲೆಯ ಕಾಂಗ್ರೆಸ್‌ ಚುನಾಯಿತ ಪ್ರತಿನಿಧಿಗಳಿಂದ ಒತ್ತಡವೂ ಹಾಕುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಬಾರಿ ಪ್ರಾತಿನಿಧ್ಯ ನೀಡಲು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇವೆ. ವಿಧಾನ ಪರಿಷತ್‌ನ ಸದಸ್ಯ ಸ್ಥಾನ ಸಿಕ್ಕರೆ ಮತ್ತಷ್ಟು ಪಕ್ಷ ಸಂಘಟನೆ ಮಾಡಲು ಅನುಕೂಲವಾಗುತ್ತದೆ. ಆದರೆ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ● ಕೇಶವರೆಡ್ಡಿ, ಜಿಲ್ಲಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ. ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರದ ಶಾಸಕರಾಗಿದ್ದವರು ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ವಿಧಾನ ಪರಿಷತ್‌ನ ಸ್ಥಾನ ಲಭಿಸಿದರೆ ಮತ್ತಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ● ಪಿ.ಎನ್‌.ಮುನೇಗೌಡ, ಕೆಪಿಸಿಸಿ ಸದಸ್ಯ, ಚಿಕ್ಕಬಳ್ಳಾಪುರ

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next