Advertisement
ಈ 15 ವರ್ಷಗಳ ಅವಧಿಯಲ್ಲಿ ವಿಭಿನ್ನ ಸರ್ಕಾರಗಳು ಅಧಿಕಾರ ನಡೆಸಿದರೂ ಜಿಲ್ಲೆಯು ಅನೇಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಆದರೂ, ಸಹ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ಸಹ ಜಿಲ್ಲೆಯ ಜನರನ್ನು ಕಾಡುತ್ತಿದೆ.
Related Articles
Advertisement
45 ಸಾವಿರ ಜನರಿಗೆ ನಿವೇಶನ ಭಾಗ್ಯ: ಜಿಲ್ಲೆಯಲ್ಲಿ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ನಿವೇಶನ ನೀಡುವ ಸಲುವಾಗಿ ಹಿಂದಿನ ಜಿಲ್ಲಾಧಿಕಾರಿ ಆರ್. ಲತಾ ಅವರು ವಿಶೇಷ ಆಸಕ್ತಿ ವಹಿಸಿ ಸುಮಾರು 45 ಸಾವಿರ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಮೊದಲಿಗೆ ಸರ್ಕಾರಿ ಜಾಗವನ್ನು ಕಾಯ್ದರಿಸಿ ಗಮನ ಸೆಳೆದಿದ್ದರು. ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಸಕಾಲ ಯೋಜನೆ ಮೂಲಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸತತವಾಗಿ 50 ಬಾರಿ ಪ್ರಥಮ ಸ್ಥಾನದಲ್ಲಿಯೇ ಉಳಿಯುವಂತೆ ಮಾಡಿದರು.
ಥೀಮ್ ಪಾರ್ಕ್ ನಿರ್ಮಾಣ: ಜಿಲ್ಲೆಯ ಕಂದವಾರ ಕೆರೆಯಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಥೀಮ್ ಪಾರ್ಕ್ ಮಾಡಲು ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಯು ಸಹ ಪ್ರಗತಿಯಲ್ಲಿದೆ. ಜಿಲ್ಲೆಯ ನಂದಿಗಿರಿಧಾಮದಲ್ಲಿ ಸುಮಾರು 93 ಕೋಟಿ ರೂಗಳ ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಚಿಂತಿಸಲಾಗಿದೆ.
ಕೈಗಾರಿಕೆ ಭಾಗ್ಯವಿಲ್ಲ: ಬೆಂಗಳೂರಿಗೆ ಸಮೀಪವಿರುವ ನಗರವನ್ನು ಉಪಗ್ರಹ ನಗರವನ್ನಾಗಿ ಮಾಡಲು ಘೋಷಣೆ ಮಾಡಲಾಗಿದೆ ಹೊರತು ಈ ಕುರಿತ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಸಚಿವ ಸುಧಾಕರ್ ಮಾದರಿ ಜಿಲ್ಲೆಯನ್ನು ಮಾಡುವ ಸಂಕಲ್ಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೂ ಹಣ್ಣು ತರಕಾರಿ ಉತ್ಪಾದನೆ ಆದರೂ ಸಹ ಅದನ್ನು ಸಂರಕ್ಷಣೆ ಮಾಡುವ ಸಲುವಾಗಿ ರೈತರಿಗೆ ಅನುಕೂಲ ಕಲ್ಪಿಸಲು ಕೋಲ್ಡ್ ಸ್ಟೋರೇಜ್‌ಗಳ ಸೌಲಭ್ಯವಿಲ್ಲದಂತಾಗಿದೆ. ಕೃಷಿ ಇಲಾಖೆಯ ಮೂಲಕ ಕೋಲ್ಡ್ ಸ್ಟೋರೇಜ್ ಸೆಂಟರ್ ಮಾಡಲು ಈಗ ಪ್ರಯತ್ನಗಳು ಪ್ರಾರಂಭವಾಗಬೇಕಿದೆ.
ಜಿಲ್ಲೆಯಲ್ಲಿ ಈಗಾಗಲೇ 8 ಮಂದಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಅದರಲ್ಲಿ ಪ್ರಮುಖವಾಗಿ ದಿವಂಗತ ಪ್ರೊ ಮುಮ್ತಾಜ್ ಅಲೀಖಾನ್ ತಮ್ಮ ಕಾರ್ಯವೈಖರಿಯ ಮೂಲಕ ಜಿಲ್ಲೆಯ ಪ್ರಗತಿಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ ಅಲಂಗೂರು ಶ್ರೀನಿವಾಸ್, ನಾರಾಯಣಸ್ವಾಮಿ, ಶೋಭ ಕರಂದ್ಲಾಜೆ, ವೆಂಕಟರವಣಪ್ಪ, ದಿನೇಶ್ ಗುಂಡೂರಾವ್, ರೋಶನ್ ಬೇಗ್, ರಾಮಲಿಂಗಾರೆಡ್ಡಿ, ಎನ್‌ಹೆಚ್ ಶಿವಶಂಕರರೆಡ್ಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಸುಬೋಧ್ ಯಾದವ್ ಪ್ರಥಮ ಜಿಲ್ಲಾಧಿಕಾರಿ: ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ದಿಗೆ ಪ್ರಥಮ ಡೀಸಿ ಸುಬೋಧ್ ಯಾದವ್, ನಂತರ ಅನುಕ್ರಮವಾಗಿ ಅನ್ವರ್ ಪಾಷ, ಡಾ.ಮಂಜುಳಾ, ಡಾ.ವಿಶಾಲ್, ಡಾ.ಎಂ.ವಿ.ವೆಂಕಟೇಶ್, ದೀಪ್ತಿ ಆದಿತ್ಯ ಕಾನಡೆ, ಅನಿರುದ್ ಶ್ರವಣ್, ಆರ್.ಲತಾ ಹಾಗೂ ಪ್ರಸ್ತುತ ಹಾಲಿ ಜಿಲ್ಲಾಧಿಕಾರಿ ಎನ್‌ಎಂ ನಾಗರಾಜ್ ಅವರು ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
ಹೊಸ ತಾಲೂಕುಗಳ ರಚನೆ: ಚಿಕ್ಕಬಳ್ಳಾಪುರ ಜಿಲ್ಲೆ ಉದಯವಾಗಿ 15 ವರ್ಷಗಳ ಅವಧಿಯಲ್ಲಿ 6 ತಾಲೂಕುಗಳು ರಚನೆಯಾಗಿತ್ತು. ಈಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಹಾಗೂ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂಕುಗಳಾಗಿ ಘೋಷಣೆ ಮಾಡಿ ಸರ್ಕಾರ ಅಧೀಕೃತವಾಗಿ ಅಧಿಸೂಚನೆಗಳನ್ನು ಹೊರಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ 15 ವರ್ಷ ಪೂರ್ಣಗೊಂಡರೂ ಜಿಲ್ಲೆಯ ಹೂವು ಬೆಳೆಗಾರರಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಿಲ್ಲ. ರೇಷ್ಮೆ ಬೆಳೆಗಾರರಿಗೆ ಮತ್ತು ರೈತರ ಪ್ರಗತಿಗೆ ಪೂರಕ ಯೋಜನೆಗಳ ಅನುಷ್ಠಾನವಾಗಿಲ್ಲ. –ಭಕ್ತರಹಳ್ಳಿ ಬೈರೇಗೌಡ, ರೈತಸಂಘದ ಪ್ರಧಾನ ಕಾರ್ಯದರ್ಶಿ
ಜಿಲ್ಲೆಯು 15 ವರ್ಷ ಪೂರೈಕೆ ಮಾಡಿರುವುದು ಸಂತೋಷ ಆದರೆ 2013 ರಿಂದ 2018 ರವರೆಗೆ ಜಿಲ್ಲೆಯ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು ನಂತರದ ದಿನಗಳಲ್ಲಿ ಜಿಲ್ಲೆಯ ಪ್ರಗತಿ ವೇಗವಾಗಿ ಕಂಡಿಲ್ಲ. – ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಚಿಕ್ಕ ಬಳ್ಳಾಪುರ ವನ್ನು ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರು ಜಿಲ್ಲೆಯಾಗಿ ಘೋಷಣೆ ಮಾಡಿ ಅವರ ಅವಧಿಯಲ್ಲಿ ವೇಗವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಿತೇ ವಿನಃ ನಂತರದ ದಿನಗಳಲ್ಲಿ ವೇಗ ಪಡೆದಿಲ್ಲ. – ಕೆ.ಎಂ. ಮುನೇಗೌಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ
ಜಿಲ್ಲಾ ರಚನೆ ಬಳಿಕ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು, ನೀರಾವರಿ ಯೋಜನೆಗಳು, ವೈದ್ಯಕೀಯ ಕಾಲೇಜುಗಳ ನಿರ್ಮಾಣ ಸಂತಸ ಮೂಡಿಸಿವೆ. – ಎಂ.ಜಯರಾಂ, ಜಿಲ್ಲಾ ಹೋರಾಟ ಸಮಿತಿ ಮುಖಂಡ
ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆಯಿದ್ದರೂ ರೈತರು ಹಾಲಿನ ಹೊಳೆ ಹರಿಸಿದ್ದಾರೆ. 13 ಸಾವಿರ ಕೋಟಿ ಖರ್ಚು, ಆದರೂ ಎತ್ತಿನಹೊಳೆ ಹರಿಯಲಿಲ್ಲ, ಎಚ್.ಎನ್ ಮತ್ತು ಕೆಸಿ ವ್ಯಾಲಿಯಿಂದ ಅಪಾಯ ಸಾಧ್ಯತೆಯಿದೆ. – ಆಂಜಿನೇಯರೆಡ್ಡಿ, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
-ಎಂ.ಎ.ತಮೀಮ್ ಪಾಷ