ಚಿಕ್ಕಬಳ್ಳಾಪುರ: ರಾಜ್ಯದ ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ವಂಚಿತ ಶಾಸಕರ, ಹಿರಿಯ ನಾಯಕರ ಅಸಮಾಧಾನ ಭುಗಿಲೆದ್ದಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸ ತೊಡಗಿವೆ.
ಶನಿವಾರ ಮಧ್ಯಾಹ್ನ ಹೊರ ಬಿದ್ದ ಕಾಂಗ್ರೆಸ್‌ನ 3ನೇ ಪಟ್ಟಿಯಲ್ಲಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಸದಸ್ಯ ವಿನಯ್ ಶಾಮ್‌ಗೆ ಕ್ಷೇತ್ರದ ಟಿಕೆಟ್ ಸಿಗದೇ ಇರುವುದು ಸಹಜವಾಗಿಯೇ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯದ ಮುನ್ಸೂಚನೆ ಕಂಡು ಬರುತ್ತಿದೆ.
ತಳವೂರುವಲ್ಲಿ ಇಂದಿಗೂ ಸಫಲ ಕಂಡಿಲ್ಲ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಆರ್.ಎಲ್.ಜಾಲಪ್ಪ ಹೆಸರು ಅಜರಾಮರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 3 ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಜಾಲಪ್ಪ ಕುಟುಂಬಕ್ಕೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ಒಂದು ಕಾಲಕ್ಕೆ ಕ್ಷೇತ್ರದಲ್ಲಿ ರಾಜಕೀಯವಾಗಿ ಹಿಡಿತ ಸಾಧಿಸಿದ್ದ ಜಾಲಪ್ಪ, ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಿಗೆ ಕಾಂಗ್ರೆಸ್ ಹೈಕಮಾಂಡ್ ಆಗಿದ್ದರು. ಆದರೆ, ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದ ನಂತರ ಜಾಲಪ್ಪ ಸಂಬಂಧಿ, ಕುಟುಂಬ ಕ್ಷೇತ್ರದಲ್ಲಿ ರಾಜಕೀಯವಾಗಿ ತಳವೂರುವಲ್ಲಿ ಇಂದಿಗೂ ಸಫಲ ಕಂಡಿಲ್ಲ.
2008ರಲ್ಲಿ ಜಿ.ಎಚ್.ನಾಗರಾಜ್‌ಗೆ ಟಿಕೆಟ್ ತಪ್ಪಿತ್ತು: ವಿನಯ್ ಶಾಮ್‌ಗೆ ಈಗ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಂತೆ 2008 ರಲ್ಲಿ ಆಗಷ್ಟೇ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ವಿನಯ್‌ರವರ ತಂದೆ ಜಿ.ಎಚ್ .ನಾಗರಾಜ್‌ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಆಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗೌರಿಬಿದನೂರಿನ ಎಸ್ .ವಿ.ಅಶ್ವತ್ಥನಾರಾಯಣ್‌ಗೆ ಟಿಕೆಟ್ ನೀಡಿದ್ದರು. ಈ ವೇಳೆ ನಾಗರಾಜ್, ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರಿಂದ ಕೈ ಸೋತಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿ ಅಶ್ವತ್ಥನಾರಾಯಣ್ 26,473 ಮತ ಪಡೆದರೆ ಜಿ.ಎಚ್.ನಾಗರಾಜ್ 22,041 ಮತ ಪಡೆದಿದ್ದರು.
ಕಾಂಗ್ರೆಸ್ ಒಡಕಿನ ಲಾಭ ಪಡೆದ ಜೆಡಿಎಸ್‌ನ ಕೆ.ಪಿ.ಬಚ್ಚೇಗೌಡ 49,774 ಮತ ಪಡೆದು ಸುಲಭವಾಗಿ ಗೆಲುವು ಸಾಧಿಸಿದ್ದರು. ನಂತರ 2013 ರಲ್ಲಿ ಕೂಡ ಟಿಕೆಟ್‌ಗೆ ಪ್ರಯತ್ನಿಸಿದರೂ ಸಿಗದೇ ಸುಧಾಕರ್ ಪಾಲಾಗಿತ್ತು. ಆಗ ಜೆಡಿಎಸ್ ಪರ ಕೆಲಸ ಮಾಡಿದರು ಎನ್ನುವ ಆರೋಪ ವಿನಯ್ ಕುಟುಂಬದ ಮೇಲಿದೆ 2018 ರಲ್ಲಿ ಎರಡನೇ ಬಾರಿಗೆ ಸುಧಾಕರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ವಿ.ನವೀನ್ ಕಿರಣ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರಿಗೆ ವಿನಯ್ ಶಾಮ್ ಕುಟುಂಬ ಬೆಂಬಲಿಸಿತ್ತು. ಹೀಗೆ 3 ಚುನಾವಣೆಗಳಿಂದ ಕಾಂಗ್ರೆಸ್ ಪರ ವಿನಯ್ ಶಾಮ್ ಕುಟುಂಬ ನಿಲ್ಲಲಿಲ್ಲ ಎಂಬ ಕಾರಣಕ್ಕೆ ಖಯ ಟಿಕೆಟ್ ಸಿಗಲಿಲ್ಲ ಎನ್ನುವ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ.
ವಿನಯ್ ಶಾಮ್‌ಗೆ ಜೆಡಿಎಸ್ ಗಾಳ?: ಕಾಂಗ್ರೆಸ್ ಟಿಕೆಟ್ ವಂಚಿತ ವಿನಯ್ ಶಾಮ್‌ಗೆ ಜೆಡಿಎಸ್‌ನ ರಾಜ್ಯ ನಾಯಕರು ಸಂಪರ್ಕಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಜೆಡಿಎಸ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ. ಇದೀಗ ಕೈ ಟಿಕೆಟ್ ವಂಚಿತ ವಿನಯ್ ಶಾಮ್‌ರನ್ನು ಪಕ್ಷಕ್ಕೆ ಬರುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಬದಲಾವಣೆ ಆಗದೇ ಇದ್ದರೂ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವಂತೆ ದಳಪತಿಗಳು ಕೋರಿದ್ದಾರೆ. ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮನ್ನು ಎಂಎಲ್‌ಸಿ ಮಾಡುವ ಭರವಸೆ ವಿನಯ್‌ಗೆ ಕೊಟ್ಟಿದ್ದಾರೆಂದು ಬಲ್ಲಮೂಲಗಳು ತಿಳಿಸಿವೆ.
ಬಾಗೇಪಲ್ಲಿ, ಶಿಡ್ಲಘಟ್ಟ ಕ್ಷೇತ್ರದಲ್ಲೂ ಕಾಂಗ್ರೆಸ್ ಪರಿಸ್ಥಿತಿ ಭಿನ್ನವಾಗಿಲ್ಲ: ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್‌ಗೆ ಉಳಿದ ಶಿಡ್ಲಘಟ್ಟ, ಬಾಗೇಪಲ್ಲಿ ಕ್ಷೇತ್ರದಲ್ಲೂ ಕೂಡ ಬಂಡಾಯ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಬಾಗೇಪಲ್ಲಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಟಿಕೆಟ್ ಕೈ ತಪ್ಪಿರುವುದ್ದಕ್ಕೆ ಆಕ್ರೋಶಗೊಂಡು ಹಾಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಟಾರೆಡ್ಡಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಶಿಡ್ಲಘಟ್ಟ ಕ್ಷೇತ್ರಕ್ಕೆ ಸದ್ಯ ಇನ್ನೂ ಟಿಕೆಟ್ ಯಾರಿಗೂ ಘೋಷಣೆ ಆಗದೇ ಇರುವುದರಿಂದ ಬಂಡಾಯ ಕಾಣಿಸಿಕೊಂಡಿಲ್ಲ. ಟಿಕೆಟ್ ಘೋಷಣೆ ಬಳಿಕ ಅಲ್ಲಿಯೂ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ.
– ಕಾಗತಿ ನಾಗರಾಜಪ್ಪ