Advertisement

ಚಿಕ್ಕಬಳ್ಳಾಪುರ: ನಗರೋತ್ಥಾನ ಹಣ ಬಳಕೆಗೆ ಹಗ್ಗ ಜಗ್ಗಾಟ

12:31 PM Oct 17, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಮೂಲ ಸೌಕರ್ಯಗಳಿಲ್ಲದೇ ಅವ್ಯವಸ್ಥೆಗಳ ಆಗರವಾಗಿದೆ. ಎತ್ತ ಕಣ್ಣಾಯಿಸಿ ನೋಡಿದರೂ ಒಳಚರಂಡಿ ದುಸ್ಥಿತಿ, ಸ್ವತ್ಛತೆ ಕಾಣದೇ ಅಸ್ವತ್ಛತೆ, ಬೀದಿ ದೀಪಗಳ ಅವ್ಯವಸ್ಥೆ ಎದ್ದು ಕಾಣುತ್ತಿದೆ.

Advertisement

ರಸ್ತೆಗಳಲ್ಲಿ ಗುಂಡಿಗಳ ಕಾರುಬಾರಿಗೆ ಕೊನೆ ಇಲ್ಲದಂತಾಗಿದೆ. ಆದರೆ, ಜಿಲ್ಲಾ ಕೇಂದ್ರದ ನಗರಸಭೆ ಮಾತ್ರ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಅದರಲ್ಲೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದು, ನಗರೋತ್ಥಾನ ಯೋಜನೆಯಡಿ ಚಿಕ್ಕಬಳ್ಳಾಪುರ ನಗರಸಭೆಗೆ ಬಿಡುಡಗೆ ಆಗಿರುವ ಕೋಟಿ ಕೋಟಿ ಅನುದಾನ ಬಳಕೆಗೆ ನಡೆಯುತ್ತಿರುವ ರಾಜಕೀಯ ಹಗ್ಗಜಗ್ಗಾಟವೇ ಸಾಕ್ಷಿಯಾಗಿವೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಅದರಲ್ಲೂ ರಾಜ್ಯ ಪೌರಾಡಳಿತ ಸಚಿವರಾಗಿದ್ದ ಎಂಟಿಬಿ ನಾಗರಾಜ್‌ ವಿಶೇಷ ಆಸಕ್ತಿ ವಹಿಸಿ ಜಿಲ್ಲಾ ಕೇಂದ್ರದ ಮೂಲ ಸೌಕರ್ಯ ಅಭಿವೃದ್ದಿಗೆ 40 ಕೋಟಿ ವಿಶೇಷ ಅನುದಾನ ನೀಡಿದ್ದರು. ಸರಿ ಸುಮಾರು 2 ವರ್ಷದಿಂದ ಅನುದಾನ ಬಳಕೆ ಆಗದೇ ರಾಜಕೀಯ ಕಾರಣಗಳಿಗೆ ಸರ್ಕಾರ ಅನುದಾನ ನಗರಸಭೆ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ನಗರದಲ್ಲಿ ಮೂಲ ಸೌಕರ್ಯಗಳು ಅಭಿವೃದ್ಧಿ ಕಾಣದೇ ಸಾರ್ವಜನಿಕರ ಆಕ್ರೋಶ, ಟೀಕೆಗೆ ಗುರಿಯಾಗಿದೆ.

ಕಾಮಗಾರಿಗಳಿಗೆ ಬ್ರೇಕ್‌: ಸದ್ಯ ನಗರಸಭೆಗೆ ಬಿಡುಗಡೆಗೊಂಡಿರುವ ಕೋಟಿ ಕೋಟಿ ನಗರೋತ್ಥಾನ ಅನುದಾನ ಬಳಕೆ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿ ಪಕ್ಷಗಳ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಶುರುವಾಗುವ ಮೂಲಕ ಅನುದಾನ ಬಳಕೆಗೆ ನಗರಸಭೆ ತಯಾ ರಿಸಿರುವ ಕ್ರಿಯಾ ಯೋಜನೆ ದಿಢೀರ್‌ ರದ್ದುಗೊಂಡಿದೆ. ಇದು ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಸದ್ಯ ನಗರಸಭೆಗೆ ಆಡಳಿತ ಮಂಡಳಿ ಇಲ್ಲದ ಕಾರಣ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ಹಿಂದೆ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ನಗರಸಭೆ ಚುಕ್ಕಾಣಿ ಹಿಡಿದಿತ್ತು. ಆಗ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಮಾರ್ಗದರ್ಶನದಂತೆ ನಗರೋತ್ಥಾನ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸಿ ಕಾಮಗಾರಿಗಳಿಗೆ ಟೆಂಡರ್‌ ಕರೆಯುವ ಹಂತಕ್ಕೆ ಹೋಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗುತ್ತಿದ್ದಂತೆ ಜಿಲ್ಲೆಗೆ ಉಸ್ತುವಾರಿ ಸಚಿವರು ಬದಲಾದ ಕೂಡಲೇ ನಗರಸಭೆ ಸಿದ್ಧಪಡಿಸಿದ್ದ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬ್ರೇಕ್‌ ಬಿದ್ದಿದೆ.

ಒಟ್ಟಿನಲ್ಲಿ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವ ರೀತಿಯಲ್ಲಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಬಂದರೂ ರಾಜಕೀಯ ಪ್ರತಿಷ್ಠೆಗಳಿಂದಾಗಿ ಸಕಾಲದಲ್ಲಿ ಅನುದಾನ ಬಳಕೆ ಆಗದೇ, ಎರಡು ವರ್ಷದಿಂದ ನಗರೋತ್ಥಾನ ದಡಿ ಕಾಮಗಾರಿಗಳು ನಡೆಯದೇ ಇರುವುದು ಜಿಲ್ಲಾ ಕೇಂದ್ರದ ನಾಗರಿಕರ ಹಣೆಬರಹ ಎಂದರೆ ತಪ್ಪಗಲಾರದು.

Advertisement

ಈ ಬಗ್ಗೆ ಉಸ್ತುವಾರಿ ಸಚಿವ ಸುಧಾಕರ್‌ ಹೇಳಿದ್ದೇನು?: ಚಿಕ್ಕಬಳ್ಳಾಪುರ ನಗರಸಭೆಗೆ ನಗರೋತ್ಥಾನ ಯೋಜನೆಯಡಿ ಮಂಜೂರಾಗಿದ್ದ ಅನುದಾನವನ್ನು ಕೆಲವರು ಅವೈಜ್ಞಾನಿಕವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಕೇವಲ ಬಿಜೆಪಿ ಸದಸ್ಯರು ಇರುವ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ಹಳೆ ಕ್ರಿಯಾ ಯೋಜನೆಯನ್ನು ರದ್ದುಗೊಳಿಸಿ ಹೊಸದಾಗಿ ಅವಶ್ಯಕತೆ ಇರುವ ಕಾಮಗಾರಿಗಳಿಗೆ ಹಾಗೂ ಶಾಶ್ವತವಾಗಿ ಅಭಿವೃದ್ಧಿ ಕೆಲಸಗಳು ನಡೆಯುವ ರೀತಿಯಲ್ಲಿ ಕ್ರಿಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ, ಆಗಸ್ಟ್‌ ತಿಂಗಳಲ್ಲಿ ನಡೆದಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದ್ದರು.

ನಗರೋತ್ಥಾನ ಯೋಜನೆಯುಡಿ ಕರೆಯಲಾಗಿದ್ದ ಟೆಂಡರ್‌ನ್ನು ಸದ್ಯ ರದ್ದು ಮಾಡಲಾಗಿದೆ. ಸದ್ಯಕ್ಕೆ ನಗರೋತ್ಥಾನ ಕಾಮಗಾರಿಗಳು ನಮ್ಮಲ್ಲಿ ನಡೆಯುತ್ತಿಲ್ಲ. ●ಮಂಜುನಾಥ, ನಗರಸಭೆ ಆಯುಕ್ತರು

ಚಿಕ್ಕಬಳ್ಳಾಪುರ ನಗರಸಭೆಗೆ ನಗರೋತ್ಥಾನ ಯೋಜನೆಯಡಿ ಕೋಟ್ಯಾಂತರ ರೂ.ಅನುದಾನ ಬಂದು ಒಂದೂವರೆ ವರ್ಷ ಕಳೆಯುತ್ತಿದೆ. ಇಲ್ಲಿವರೆಗೂ ಕಾಮಗಾರಿಗಳಿಗೆ ಅನು ಮೋದನೆ ಸಿಕ್ಕಿಲ್ಲ. ನಮ್ಮ ವಾರ್ಡ್‌ಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ತುಂಬ ವಿಳಂಬ ಆಗುತ್ತಿದೆ. ಅಭಿವೃದ್ಧಿ ಕಾರ್ಯ ಗಳಿಗೆ ಬರುವ ಅನುದಾನ ಸಕಾಲದಲ್ಲಿ ಸದ್ಬಳಕೆ ಆಗದೇ ಹೋದರೆ ಹೇಗೆ. ●ಆರ್‌.ಮಟಮಪ್ಪ, ನಗರಸಭಾ ಸದಸ್ಯರು.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next