ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆದ ಬೆನ್ನಲೇ ಸೋಮವಾರ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದರು.
ನಗರದ ಹೊರ ವಲಯದ ಹಾರೋಬಂಡೆ ಸಮೀಪ ಇರುವ ಶ್ರೀ ಶಿರಡಿ ಸಾಯಿ ಬಾಬ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ನಾಯಕರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮನೆ ಮನೆ ಪ್ರಚಾರಕ್ಕೆ ಚಾಲನೆ ನೀಡಿದರು.
ಸುಧಾಕರ್ ವಿರುದ್ದ ಕೈ ನಾಯಕರ ವಾಗ್ದಾಳಿ ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕರು, ಅರ್ನಹ ಶಾಸಕ ಡಾ ಕೆ.ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದರು. ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಸುಧಾಕರ್ ಪಕ್ಷ ದ್ರೋಹಕ್ಕೆ ಈ ಬಾರಿ ತಕ್ಕಪಾಠ ಕಲಿಸಲಿದ್ದಾರೆ. ಈ ಚುನಾವಣೆ ಧರ್ಮ, ಆಧರ್ಮ ಹಾಗೂ ನ್ಯಾಯ, ಆನ್ಯಾಯದ ನಡುವಿನ ಚುನಾವಣೆ ಎಂದರು. ನಮಗೆ ಗೆಲುವು ಮುಖ್ಯವೇ ಹೊರತು ಅಭ್ಯರ್ಥಿ ಅಲ್ಲ. ಕ್ಷೇತ್ರದಲ್ಲಿ ಎಲ್ಲ ಮುಖಂಡರು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮಾಜಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಎನ್.ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಟಿಕೆಟ್ ಆಕಾಂಕ್ಷಿಗಳಾದ ನಂದಿ ಅಂಜಿನಪ್ಪ, ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್, ಜಿ.ಹೆಚ್. ನಾಗರಾಜ್, ಗಂಗರೇಕಾಲುವೆ ನಾರಾಯಣಸ್ವಾಮಿ, ಅಡ್ಡಗಲ್ ಶ್ರೀಧರ್, ಕೊಡೇಸ್ ವೆಂಕಟೇಶ್, ಎಸ್.ಪಿ.ಶ್ರೀನಿವಾಸ್, ಮಂಚನಬಲೆ ಇಸ್ಮಾಯಿಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.