ಚಿಕ್ಕಬಳ್ಳಾಪುರ: ಗ್ರಾಪಂಗಳ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ತೆರೆಯುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಒಂದಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ, ಮತ್ತೂಂದಡೆ ಜಿಲ್ಲಾದ್ಯಂತ ತೀವ್ರ ಬರಗಾಲದ ನಡುವೆಯು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.
ಹೌದು, ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ತಿಂಗಳ ವರೆಗೂ ಕೇವಲ 5 ತಿಂಗಳಲ್ಲಿ ಜಿಲ್ಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದು ಬರೋಬ್ಬರಿ 1,195 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ನಿತ್ಯ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ನಡೆಯುತ್ತಿದ್ದು, ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಗಳೇ ಅಕ್ರಮವಾಗಿ ಮದ್ಯ ಮಾರಾಟದ ಬಾರ್‌ಗಳಾಗಿ ಪರಿವರ್ತನೆಗೊಂಡು ಗ್ರಾಮೀಣ ಭಾಗದ ಜನರಲ್ಲಿ ಮದ್ಯದ ಕಿಕ್ ಹೆಚ್ಚಿಸುವಲ್ಲಿ ನಿರತ ವಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನೆ ಗುರಿಯಾಗಿಸಿಕೊಂಡು ಚಿಲ್ಲರೆ ಅಂಗಡಿಗಳಿಗೆ ನಗರ ಭಾಗದಿಂದ ಭರಪೂರ ಅಕ್ರಮ ಮದ್ಯ ಪೂರೈಸಿ ಹೆಚ್ಚಿನ ಬೆಲೆಗೆ ಮಾರಾಟ ಪ್ರಕರಣಗಳು ಹೆಚ್ಚಾಗಿದ್ದರೂ ಹೇಳ್ಳೋವರು ಕೇಳ್ಳೋವರೇ ಇಲ್ಲವಾಗಿದೆ.
ಪೊಲೀಸ್ ಠಾಣೆಗಳಲ್ಲಿ ನಿತ್ಯ ಪ್ರಕರಣ: ಅಬಕಾರಿ ಇಲಾಖೆ ಅಧಿಕಾರಿಗಳೇ ಅಕ್ರಮ ಮದ್ಯದ ವಿರುದ್ಧ ಸಾವಿರಾರು ಪ್ರಕರಣ ಗಳನ್ನು ದಾಖಲಿಸಿ ಲಕ್ಷಾಂತರ ರೂ. ಮೌಲ್ಯದ ಲಕ್ಷಾಂತರ ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಇದೇ ರೀತಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿತ್ಯ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗು ತ್ತಿದ್ದು, ನಿತ್ಯ ಒಂದಲ್ಲ ಒಂದು ಠಾಣೆಯಲ್ಲಿ ಅಕ್ರಮ ಮದ್ಯ ಮಾರಾಟದ ದೂರುಗಳು ದಾಖಲಾಗುತ್ತಿದ್ದರೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಾತ್ರ ಅಕ್ರಮ ಮದ್ಯ ಸಾಗಾಟ, ಮಾರಾಟ ನಿಲ್ಲುತ್ತಿಲ್ಲ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ತೀವ್ರ ಬರಗಾಲ ಇದ್ದು ಕುಡಿಯುವ ನೀರಿನ ಸಮಸ್ಯೆ ಹಲವು ಗ್ರಾಮಗಳನ್ನು ಬಾಧಿಸುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಮದ್ಯದ ಕಿಕ್‌ಗೆ ಮಾತ್ರ ಕಡಿವಾಣ ಇಲ್ಲದೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಹೆಚ್ಚಾಗಿರುವುದು ಎದ್ದು ಕಾಣುತ್ತಿದೆ.
ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು ಟಾಪ್!: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದಲ್ಲಿ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ತಾಲೂಕು ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಗೌರಿಬಿದನೂರು ಇದೆ. ಮೂರನೇ ಸ್ಥಾನದಲ್ಲಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಇದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ನಿತ್ಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿಯೆ ಕೂಲಿ ಕಾರ್ಮಿಕರು, ಬಡವರು ದುಡಿದಿದ್ದೆಲ್ಲಾ ಮದ್ಯಕ್ಕೆ ಖರ್ಚು ಮಾಡುವ ದುಸ್ಥಿತಿಗೆ ತಲುಪಿ ಬಡ ಕಟುಂಬಗಳು ಬೀದಿಗೆ ಬರುವಂತಾಗಿದೆ.
– ಕಾಗತಿ ನಾಗರಾಜಪ್ಪ