Advertisement

ಚಿಕ್ಕಬಳ್ಳಾಪುರ: ಕೈ, ಕಮಲ, ತೆನೆ ಸಮಬಲದ ಹೋರಾಟ

04:40 PM May 08, 2023 | Team Udayavani |

ಚಿಕ್ಕಬಳ್ಳಾಪುರ: ದಶಕಗಳ ಕಾಲ ಪರಿಶಿಷ್ಟರ ಮೀಸಲು ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ 2008 ರಲ್ಲಿ ಸಾಮಾನ್ಯ ಕ್ಷೇತ್ರವಾದ ಬಳಿಕ ಕ್ಷೇತ್ರದ ರಾಜಕಾರಣದ ದಿಕ್ಕು ದಿಸೆ ಬದಲಾಗಿದೆ. ಸದ್ಯ ಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದು, ಚುನಾವಣಾ ಕಣ ಜಿದ್ದಾಜಿದ್ದಿನಿಂದ ಕೂಡಿದೆ.

Advertisement

ಕ್ಷೇತ್ರದ ರಾಜಕೀಯ ಹಿನ್ನೋಟ ಗಮನಿಸಿದರೆ ಇದುವರೆಗೂ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಮಾತ್ರ ನಡೆಯು ತ್ತಿದ್ದ ನೇರ ಹಣಾಹಣಿ ಈ ಬಾರಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಗೆ ಕ್ಷೇತ್ರ ಸಾಕ್ಷಿಯಾಗಿದೆ. ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್‌ ಭದ್ರಕೋಟೆ ಯಾಗಿದೆ. 15 ಚುನಾವಣೆಗಳಲ್ಲಿ 10ಕ್ಕೂ ಹೆಚ್ಚು ಬಾರಿ ಗೆಲುವಿನ ನಗೆ ಬೀರಿದೆ. ಆದರೆ, 2008ರಲ್ಲಿ ಜೆಡಿಎಸ್‌ ಹಾಗೂ 2019ರ ಉಪ ಚುನಾವಣೆಯಲ್ಲಿ ಬಿಜೆಪಿ ಒಮ್ಮೆ ಮಾತ್ರ ವಿಜಯದ ಪತಾಕೆ ಹಾರಿಸಿದೆ.

ಬಿಜೆಪಿಯಿಂದ ಡಾ.ಸುಧಾಕರ್‌ ಸ್ಪರ್ಧೆ: ಕಾಂಗ್ರೆಸ್‌ ಮೂಲಕ ರಾಜಕಾರಣ ಪ್ರವೇಶಿಸಿದ ಸುಧಾಕರ್‌, 2013, 2018 ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲದ ಖಾತೆ ತೆರೆದರು.

ದಳಕ್ಕೆ ಕೆ.ಪಿ.ಬಚ್ಚೇಗೌಡ: ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾದ ಮೊದಲ ಚುನಾವಣೆಯಲ್ಲಿ 2008 ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಕೆ.ಪಿ.ಬಚ್ಚೇಗೌಡ ಬಳಿಕ 2013, 2018ರಲ್ಲಿ ಸುಧಾಕರ್‌ ವಿರುದ್ಧ ಸೋತರು. 2019ರ ಉಪ ಚುನಾವಣೆಯಲ್ಲಿ ಸ್ಫರ್ಧೆಯಿಂದ ಹಿಂದೆ ಸರಿದಿದ್ದ ಅವರು, ಈಗ ಮತ್ತೆ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ.

ಇನ್ನೂ ಕಾಂಗ್ರೆಸ್‌ ಪಕ್ಷ ಪ್ರದೀಪ್‌ ಈಶ್ವರ್‌ ಎಂಬ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸುಧಾಕರ್‌ ವಿರುದ್ಧ 2018 ರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸಿ ಹೋರಾಟ ನಡೆಸಿದ್ದ ಪ್ರದೀಪ್‌ ಈಶ್ವರ್‌ರನ್ನು ಕಣಕ್ಕೆ ಇಳಿಸಿದೆ. ಕೊತ್ತನೂರು ಮಂಜುನಾಥ, ರಕ್ಷಾ ರಾಮಯ್ಯ ಸ್ಪರ್ಧೆ ಬಗ್ಗೆ ಸಾಕಷ್ಟು ಕೇಳಿ ಬಂದರೂ ಅಂತಿಮವಾಗಿ “”ಬಲಿಜ” ಅಸ್ತ್ರ ಬಳಸಿ ಕಣಕ್ಕಿಳಿಸಿದೆ.

Advertisement

ನೀರಾವರಿಯೇ ಪ್ರಮುಖ ಚರ್ಚಾ ವಿಷಯ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳ ನಡುವೆ ಚರ್ಚೆ ಆಗುವುದೇ ಶಾಶ್ವತ ನೀರಾವರಿ ವಿಚಾರ. ಈ ವಿಚಾರದಲ್ಲಿ ಮೂರು ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ ಇದ್ದೇ ಇದೆ.

ಕ್ಷೇತ್ರದಲ್ಲಿ ಜಾತಿ ಲೆಕ್ಕಚಾರ ಜೋರು: ಜಿಲ್ಲೆಯ ಇತರೆ ಕ್ಷೇತ್ರ ಗಳಿಗೆ ಹೋಲಿಸಿಕೊಂಡರೆ ಚಿಕ್ಕ ಬಳ್ಳಾಪುರ ಕ್ಷೇತ್ರ ಜಾತಿ ಲೆಕ್ಕಚಾ ರದ ರಾಜಕಾರಣ ಪರಾಕಷ್ಠೆ ತಲುಪಿದೆ ಎನ್ನಬಹುದು. ಟಿಕೆಟ್‌ ನೀಡುವಾಗ ಬಿಜೆಪಿ, ಜೆಡಿಎಸ್‌ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿದ್ದು, ಕಾಂಗ್ರೆಸ್‌ ಮಾತ್ರ ಕ್ಷೇತ್ರದಲ್ಲಿ ಬಲಿಷ್ಠ ಸಮುದಾಯದ ಜೊತೆಗೆ ಸಾಕಷ್ಟು ರಾಜಕೀಯ ಪ್ರಜ್ಞೆ ಹೊಂದಿರುವ ಬಲಿಜ ಅಸ್ತ್ರ ಬಳಸಿ ಪ್ರದೀಪ್‌ ಈಶ್ವರ್‌ಗೆ ಟಿಕೆಟ್‌ ಕೊಟ್ಟಿದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪಗಂಡ ಜನಸಂಖ್ಯೆ ಸುಮಾರು 70 ಸಾವಿರ ಮೇಲ್ಟಪಟ್ಟು ಇದ್ದು ಒಂದು ಪಕ್ಷದ ಸೋಲು, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಇದೆ. ಆದರೆ ರಾಜಕೀಯ ಪ್ರಜ್ಞೆ ಈ ಸಮುದಾಯದಲ್ಲಿ ಕೊರತೆ ಇರುವುದರಿಂದ ಬಲಿಜಿಗರು, ಒಕ್ಕಲಿಗರು ಈ ಕ್ಷೇತ್ರದಲ್ಲಿ ಈಗ ನಿರ್ಣಾಯಕ ಸ್ಥಾನದಲ್ಲಿದ್ದಾರೆ.

ಬಂಡಾಯ ಯಾವ ಪಕ್ಷಕ್ಕೂ ಇಲ್ಲ: 2018ಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿತ್ತು. ಈ ಬಾರಿ ಯಾವ ಪಕ್ಷಕ್ಕೂ ಬಂಡಾಯದ ಬಿಸಿ ಇಲ್ಲ. ಕಾಂಗ್ರೆಸ್‌ ಟಿಕೆಟ್‌ ಸಿಗದಿರುವ ಬಗ್ಗೆ ಕೆಪಿಸಿಸಿ ಸದಸ್ಯ ವಿನಯ್‌ ಶಾಮ್‌ ತೀವ್ರ ಅಸಮಾಧಾನಗೊಂಡಿದ್ದರೂ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಟಿಕೆಟ್‌ ಕೈ ತಪ್ಪಿದಾಗಿನಿಂದಲೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕಾಂಗ್ರೆಸ್‌ನ ಒಂದಿಷ್ಟು ನಾಯಕರು, ಮುಖಂಡರು ಬಿಜೆಪಿ, ಜೆಡಿಎಸ್‌ನತ್ತ ವಾಲುತ್ತಿರುವುದು ಎದ್ದು ಕಾಣುತ್ತಿದೆ.

ಟೀಕೆಗಳು ಸಾಯುತ್ತವೆ, ಕೆಲಸಗಳು ಜೀವಂತವಾಗಿರುತ್ತವೆ. ಬಡ ರೈತರು ಕೊಳವೆ ಬಾವಿಗಳನ್ನು ಕೊರೆಯಿಸಿ ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ತಾವು ಕೊಟ್ಟ ಮಾತಿನಂತೆ ಕೆರೆಗಳನ್ನು ತುಂಬಿಸಿದ್ದೇನೆ. 1,400 ಕೋಟಿ ವೆಚ್ಚದ ಎಚ್‌ಎನ್‌ ವ್ಯಾಲಿ ನೀರು ತಂದು ಈ ಭಾಗದ ಕೆರೆಗಳಿಗೆ ನೀರು ತುಂಬಿ ಸಲಾ ಗಿದೆ, ನಂದಿ ಬೆಟ್ಟಕ್ಕೆ ರೋಪ್‌ ವೇ, ವೈದ್ಯ ಕೀಯ ಕಾಲೇಜು ನಿರ್ಮಾಣ ಹೀಗೆ ತಮ್ಮ ಸಾಧನೆಗಳು ಕ್ಷೇತ್ರದ ಜನರ ಕಣ್ಮುಂದಿವೆ. ಡಾ.ಕೆ.ಸುಧಾಕರ್‌, ಬಿಜೆಪಿ ಅಭ್ಯರ್ಥಿ

ಮೆಡಿಕಲ್‌ ಕಾಲೇಜ್‌ ಬಿಟ್ಟರೆ 10 ವರ್ಷದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಬಡವರಿಗೆ ಒಂದಿಂಚು ಭೂಮಿ ಕೊಟ್ಟಿಲ್ಲ. ಸಾಧನೆ ಹೇಳಿ ಮತ ಕೇಳುವ ಮೊದಲು ಆಸೆ, ಆಮಿಷಗಳ ಮೂಲಕ ಮತದಾರನ್ನು ಸೆಳೆಯಲಾಗುತ್ತಿದೆ. ಪಂಚರತ್ನ ಕಾರ್ಯಕ್ರಮಗಳು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ ಜನಪರ ಕಾರ್ಯಕ್ರಮಗಳು ನನಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆ ಆಗಲಿವೆ. ಕೆ.ಪಿ.ಬಚ್ಚೇಗೌಡ, ಜೆಡಿಎಸ್‌ ಅಭ್ಯರ್ಥಿ

ನಾನು ತಂದೆ, ತಾಯಿ ಇಲ್ಲದ ಅನಾಥ ಹುಡುಗ, ಕ್ಷೇತ್ರದ ಜನತೆ ಅನಾಥ ಹುಡುಗನಿಗೆ ಅಶೀರ್ವಾದ ಮಾಡುವ ವಿಶ್ವಾಸವಿದೆ. ಕ ಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸಿದ್ದು, ಕಾಂಗ್ರೆಸ್‌ ಮೇಲೆ ನಂಬಿಕೆ, ವಿಶ್ವಾಸ ಹೊಂದಿದ್ದಾರೆ. ಪ್ರದೀಪ್‌ ಈಶ್ವರ್‌, ಕಾಂಗ್ರೆಸ್‌ ಅಭ್ಯರ್ಥಿ

 –ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next