ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಮುಂಬೈ ವಲಸೆ ಕಾರ್ಮಿಕ ರಲ್ಲಿ ಮಾತ್ರ ಕಂಡು ಬರುತ್ತಿದ್ದ ಕೋವಿಡ್ 19 ಸೋಂಕು ಈಗ ಜಿಲ್ಲೆಯ ಸಮುದಾಯ ದಲ್ಲಿ ಕಂಡು ಬರುತ್ತಿದ್ದು, ಶುಕ್ರವಾರ ಒಂದೇ ದಿನ 5 ಹೊಸ ಪ್ರಕರಣಗಳು ಪತ್ತೆಯಾಗಿ ಆ ಪೈಕಿ 50 ವರ್ಷದ ವ್ಯಕ್ತಿ ಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
136ಕ್ಕೇರಿದ ಸೋಂಕಿತರು: ಚಿಕ್ಕಬಳ್ಳಾಪುರ ನಗರದಲ್ಲಿ ಪೊಲೀಸ್ ಪೇದೆ, ವ್ಯಾಪಾರಿ ಹಾಗೂ ವಲಸೆ ಕಾರ್ಮಿಕ ಮಹಿಳೆ ಸೇರಿ 3 ಮಂದಿಗೆ ಹಾಗೂ ಚಿಂತಾಮಮಣಿ ನಗರದಲ್ಲಿ ಈ ಮೊದಲು ಪತ್ತೆಯಾಗಿದ್ದ ವೃದ್ಧನ ಕುಟುಂಬದಲ್ಲಿ ಇಬ್ಬರಿಗೆ ಎರಡನೇ ಬಾರಿ ನಡೆಸಿದ ಕೋವಿಡ್ 19 ಪರೀಕ್ಷೆ ಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 131 ರಿಂದ 136ಕ್ಕೆ ಏರಿಕೆ ಕಂಡಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಅಟ್ಟ ಹಾಸ ಮುಂದುವರೆದಿದೆ.
ಮೂಲ ಪತ್ತೆ ಹಚ್ಚಬೇಕಿದೆ: ಜಿಲ್ಲೆಯಲ್ಲಿ ಇದುವರೆಗೂ ಮುಂಬೈ ವಲಸಿಗರಲ್ಲಿ ಮಾತ್ರ ಕೋವಿಡ್ 19 ಪಾಸಿಟಿವ್ ಪ್ರಕರಣ ಗಳು ಕಂಡುಬಂದಿತ್ತು. ಈಗ ಜಿಲ್ಲೆಯ ಸಮುದಾಯದಲ್ಲಿಯು ಸೋಂಕಿತರು ಪತ್ತೆಯಾಗುತ್ತಿರುವುದು ಆರೋಗ್ಯ ಇಲಾಖೆಯನ್ನು ತೀವ್ರ ಚಿಂತೆಗೀಡು ಮಾಡಿದೆ. ಶುಕ್ರವಾರ ಪತ್ತೆಯಾಗಿರುವ 5 ಹೊಸ ಪ್ರಕರಣಗಳ ಪೈಕಿ ಚಿಂತಾಮಣಿಯಲ್ಲಿ ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆದರೆ ಚಿಕ್ಕಬಳ್ಳಾಪುರದಲ್ಲಿ ಮೃತ ವ್ಯಕ್ತಿ ಸೇರಿ ಮೂವರಿಗೆ ಯಾವ ಮೂಲದಿಂದ ಸೋಂಕು ಹರಡಿದೆಯೆಂಬ ತನಿಖೆ ಆರೋಗ್ಯ ಇಲಾಖೆ ಕೈಗೆತ್ತಿಕೊಂಡಿದೆ. ಅದರಲ್ಲೂ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದ ವೃದ್ಧ ವ್ಯಾಪಾರಿಯೊಬ್ಬರಿಗೆ ಕೋವಿಡ್ 19 ಪಾಸಿಟಿವ್ ಬಂದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಮೊದಲು ನೆಗೆಟಿವ್ ಬಳಿಕ ಸೋಂಕು: ಚಿಂತಾಮಣಿ ನಗರದಲ್ಲಿ ಮೊದಲಿಗೆ ಸೋಂಕು ಕಂಡು ಬಂದ 71 ವರ್ಷದ ವೃದ್ಧನ ಮನೆಯಲ್ಲಿ ಈಗ ಇಬ್ಬರಿಗೆ ಎರಡನೇ ಬಾರಿ ನಡೆಸಿದ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
ಚಿಂತಾಮಣಿ ಯಲ್ಲಿ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿದೆ. ಜಿಲ್ಲಾದ್ಯಂತ ಇದುವರೆಗೂ ಒಟ್ಟು ಒಟ್ಟು 9,809 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಿದ್ದು ಆ ಪೈಕಿ 9,092 ಮಂದಿಗೆ ನೆಗೆಟಿವ್ ಬಂದಿದ್ದು, 136 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದೆ. ಇದುವರೆಗೂ 20 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, 116 ಜನರಿಗೆ ಸಕ್ರಿಯವಾಗಿ ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಒಟ್ಟು 581 ಮಂದಿ ವರದಿ ಬಾಕಿ ಇದೆ.