ಚಿಕ್ಕಬಳ್ಳಾಪುರ: ನಗರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜಿಲ್ಲೆಯ ರಾಜಕೀಯ ಕಡು ವೈರಿಗಳಿಗೆ ವೇದಿಕೆಯಾಯಿತು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ಡಾ.ಕೆ.ಸುಧಾಕರ್ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಯೋಗ ದಿನಾಚರಣೆಯಲ್ಲಿ ಒಟ್ಟಾಗಿ ಯೋಗ ಪ್ರದರ್ಶನ ಮೂಲಕ ಗಮನ ಸೆಳೆದರು.
ಮೊದಲಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ಆಗಮಿಸಿದರೆ ನಂತರ ಸಂಸದ ಡಾ.ಕೆ.ಸುಧಾಕರ್ ಆಗಮಿಸಿದರು. ಇಬ್ಬರು ವೇದಿಕೆಯಲ್ಲಿ ಪರಸ್ಪರ ಕೈಕುಲುಕಿಕೊಂಡರು. ನಂತರ ಕ್ರೀಡಾಂಗಣಕ್ಕೆ ಇಳಿದು ಅಕ್ಕಪಕ್ಕವೇ ಕುಳಿತು ಯೋಗಭ್ಯಾಸ ನಡೆಸಿದರು.
ಜಿಲ್ಲೆಯ ರಾಜಕೀಯ ವಲಯದಲ್ಲಿ ಇಬ್ಬರದು ಹಾವು- ಮುಂಗುಸಿಯ ಸಂಬಂದ. ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದರು. ಸಂಸದ ಡಾ.ಕೆ.ಸುಧಾಕರ್, ಬಾಗೇಪಲ್ಲಿ ಚುನಾವಣಾ ಪ್ರಚಾರದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರನ್ನು ಒಬ್ಬ ಶಕುನಿ ಎಂದು ಜರಿದಿದ್ದರು. ಡಾ.ಎಂ.ಸಿ.ಸುಧಾಕರ್ ಕೂಡ ಡಾ.ಕೆ.ಸುಧಾಕರ್ ರಾಜಕೀಯವಾಗಿ ತೀವ್ರ ವಾಗ್ದಾಳಿ ನಡೆಸಿ ಗಮನ ಸೆಳೆದಿದ್ದರು. ಇದೀಗ ಇಬ್ಬರು ರಾಜಕೀಯ ಕಡು ವೈರಿಗಳು ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹೆಚ್ಚು ಗಮನ ಸೆಳೆಯಿತು.