Advertisement

ಚಿಕ್ಕಬಳ್ಳಾಪುರ: ಶೇ.16.09 ಅರಣ್ಯ ಕೊರತೆ

07:18 AM Jun 05, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ ಭೌಗೋಳಿಕ ವಿಸ್ತರಣೆ ಆಧಾರವಾಗಿಟ್ಟುಕೊಂಡು ನೋಡುವುದಾದರೆ ಜಿಲ್ಲೆಯಲ್ಲಿ ಸರಾಸರಿ ಶೇ.33 ರಷ್ಟು ಅರಣ್ಯ ಇರಬೇಕು. ಆದರೆ ಜಿಲ್ಲೆಯಲ್ಲಿ ಕೇವಲ ಶೇ.16.91ರಷ್ಟು ಮಾತ್ರ ಕಾಡು ಇದ್ದು, ಶೇ.16.09 ರಷ್ಟು  ಅರಣ್ಯ ಕೊರತೆ ಇರುವುದು ಕಂಡು ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ದಶಕ ಉರುಳಿದರೂ ಅರಣ್ಯ ಬೆಳೆಸುವ ಕಾರ್ಯ ಮಾತ್ರ ಹಳ್ಳ ಹಿಡಿದಿದೆ ಎನ್ನುವುದು ಸ್ಪಷ್ಟವಾಗಿದೆ.

Advertisement

ಜಿಲ್ಲಾದ್ಯಂತ 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ  ಅರಣ್ಯ ಪ್ರದೇಶ ಇದೆ. ಆದರೆ ಅರಣ್ಯ ಇಲಾಖೆ ನೀಡಿರುವ ಅಂಕಿ, ಅಂಶಗಳ ಪ್ರಕಾರವೇ ಜಿಲ್ಲೆಯಲ್ಲಿ ಅರ್ಧಕ್ಕರ್ಧ ಅರಣ್ಯ ಪ್ರದೇಶ ಕಡಿಮೆ ಇರುವುದು ತೀವ್ರ ಆತಂಕ ಹಾಗೂ ಗಂಭೀರ ವಿಷಯವಾಗಿದ್ದು, ಜಿಲ್ಲೆಯಲ್ಲಿ ಕೈಗೊಂಡ  ಅರಣ್ಯೀಕರಣ ಕಾರ್ಯಕ್ರಮಗಳು ಎತ್ತ ಸಾಗಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಆತ್ಮವಲೋಕನ ಮಾಡಿಕೊಳ್ಳಬೇಕಿದೆ: ಸತತ ಹಲವು ವರ್ಷಗಳಿಂದಲೂ ಮಳೆ, ಬೆಳೆ ಇಲ್ಲದೇ ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಅರಣ್ಯ ಇಲ್ಲದೇ ಇರುವುದು ಜಿಲ್ಲೆಯ ಬರಕ್ಕೆ ಕಾರಣ ಎನ್ನುವ ಮಾತುಗಳು ಸಹಜವಾಗಿಯೇ  ಕೇಳಿ ಬರುತ್ತಿದ್ದರೂ ಸುಮಾರು ಅರ್ಧದಷ್ಟು ಕೊರತೆ ಇರುವ ಅರಣ್ಯ ಬೆಳೆಸುವಲ್ಲಿ ಇದುವರೆಗೂ ಜಿಲ್ಲಾಡಳಿತ, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಕೊಡುಗೆ ಏನು ? ಎಂಬುದನ್ನು ಇಂದಿನ ವಿಶ್ವ ಪರಿಸರ ದಿನಾಚರಣೆಯ  ಸಂದರ್ಭದಲ್ಲಿ ಆತ್ಮವಲೋಕನ ಮಾಡಿಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದೆ ಮಳೆ ಆಶ್ರಯಿಸಿಕೊಂಡು ರೈತಾಪಿ ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಬೇಕಿದೆ. ಆದರೆ ಪ್ರತಿ ವರ್ಷ ಅರಣ್ಯೀಕರಣಕ್ಕೆ  ಕೋಟ್ಯಂತರ ರೂ. ವೆಚ್ಚ ಮಾಡುವ ಸರ್ಕಾರದ ನಡೆ ಜಿಲ್ಲೆಯ ಪಾಲಿಗೆ ಕೇವಲ ಅರಣ್ಯರೋದನವಾಗಿದ್ದು, ಅರ್ಧ ಕ್ಕರ್ಧ ಕೊರತೆ ಇರುವ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯ ಜನರ ಸಹಭಾಗಿತ್ವದಲ್ಲಿ ಚುನಾಯಿತ ಜನಪ್ರತಿನಿಧಿಗಳು,  ಜಿಲ್ಲಾಡಳಿತ ಮುಂದಾಗದಿದ್ದರೆ ಜಿಲ್ಲೆಗೆ ಭವಿಷ್ಯವಿಲ್ಲ ಎನ್ನುವ ಅಭಿಪ್ರಾಯ ತಜ್ಞರಿಂದ ಕೇಳಿ ಬರುತ್ತಿದೆ.

ಗಡಿಯಲ್ಲಿ ಅರಣ್ಯ ನಾಶ: ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿಯಲ್ಲಿದ್ದು, ಇದರ ಪರಿಣಾಮ ಜಿಲ್ಲೆಯಲ್ಲಿ ಸದ್ದಿಲ್ಲದೇ ಅರಣ್ಯ ನಾಶ ಮಿತಿ ಮಿರಿದೆ. ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಹಾಗೂ ಶಿಡ್ಲಘಟ್ಟ  ತಾಲೂಕುಗಳಲ್ಲಿ ಅರಣ್ಯ ನಾಶ ಹೆಚ್ಚಾಗಿದ್ದು, ಬ್ರೇಕ್‌ ಹಾಕುವ ಕಾರ್ಯ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗಬೇಕಿದೆ.

Advertisement

ಜಿಲ್ಲೆಯ ಒಟ್ಟಾರೆ ಭೌಗೋಳಿಕ ಪ್ರದೇಶದಲ್ಲಿ ಸರಾಸರಿ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಜಿಲ್ಲೆಯಲ್ಲಿ 16.91 ರಷ್ಟು ಅರಣ್ಯ ಪ್ರದೇಶ ಇದ್ದು 16.09 ರಷ್ಟು ಅರಣ್ಯ ಕೊರತೆ ಇದೆ. ಪ್ರತಿ ವರ್ಷ ಸರ್ಕಾರದ ಮಾರ್ಗಸೂಚಿಯಂತೆ  ಅರಣ್ಯ ಬೆಳೆಸುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ. 
-ಶ್ರೀಧರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next