ಮುಂಬಯಿ, ಅ. 2: ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 220 ರೂ.ಗಳಿಗೆ ತಲುಪಿದ್ದು, ಕೋಳಿ ಮಾಂಸ ಪ್ರಿಯರ ಜೇಬಿಗೆ ದೊಡ್ಡ ಭಾರವಾಗಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಕೋಳಿ ಪೂರೈಕೆಯಾಗದಿರುವುದೇ ಈ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.
ಲಾಕ್‌ಡೌನ್‌ಗೆ ಮುಂಚಿತವಾಗಿ ಕೆ.ಜಿ.ಗೆ 80ರಿಂದ 100 ರೂ.ಗಳವರೆಗಿದ್ದ ಕೋಳಿ ಬೆಲೆಯು ಎಪ್ರಿಲ್‌ನಲ್ಲಿ ಕೋಳಿ ಉತ್ಪನ್ನಗಳ ಮೂಲಕ ಕೊರೊನಾ ಸೋಂಕು ಹರಡುತ್ತಿದೆ ಎಂಬ ಆಧಾರರಹಿತ ವರದಿಗಳಿಂದಾಗಿ ಏಕಾಏಕಿ ಕೆ.ಜಿ.ಗೆ 20 ರೂ.ಗೆ ಕುಸಿಯಲ್ಪಟ್ಟಿತ್ತು.ತಿಂಗಳುಗಳವರೆಗೆ ದೂರವಿಟ್ಟಿದ್ದ ಕೋಳಿ ಮಾಂಸವು ಮತ್ತೆ ಬೇಡಿಕೆಯಲ್ಲಿರುವ ಹೊರತಾಗಿಯೂ ಈ ಬೆಲೆ ಏರಿಕೆಯು ಬಾಯ್ಲರ್ ಕೋಳಿಗಳ ಕೊರತೆ ಪರಿಣಾಮವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಭಾರೀ ನಷ್ಟ ಎದುರಿಸಿದ ಮತ್ತು ಈಗಲೂ ಸಾಲ ತೀರಿಸುತ್ತಿರುವ ಕೋಳಿ ಮಾಲಕರು ಉತ್ಪಾದನೆ ಹೆಚ್ಚಿಸಲು ಬಂಡವಾಳ ಹೊಂದಿಲ್ಲದ ಕಾರಣ ಈ ಕೊರತೆ ನಿರ್ಮಾಣವಾಗಿದೆ. ಈ ಮಧ್ಯೆ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವು ನಿರಂತರವಾಗಿ ಹೆಚ್ಚುತ್ತಿದೆ. ಮಾರ್ಚ್ ಅಂತ್ಯದಲ್ಲಿ ಬಾಯ್ಲರ್ ಕೋಳಿಯ ಸಗಟು ಬೆಲೆ ಪ್ರತಿ ಕೆ.ಜಿ.ಗೆ 5 ರೂ.ಗಳಿಗೆ ಇಳಿದಿತ್ತು. ಈಗ ಅದು ಪ್ರತಿ ಕೆ.ಜಿ.ಗೆ 110 ರೂ.ಗಳಷ್ಟಿದೆ. ಆದಾಗ್ಯೂ ಈಗಲೂ ಸದೃಢವಾಗಿಲ್ಲ ಎಂದು ಕೋಳಿ ಮಾಲಕರು ನುಡಿಯುತ್ತಿದ್ದಾರೆ.
ಬಾಯ್ಲರ್ ಕೋಳಿಗಳ ಸರಬರಾಜು ಹೆಚ್ಚಾಗಿ ನಾಸಿಕ್, ಪುಣೆ, ಬಾರಾಮತಿ, ಅಲಿಬಾಗ್, ಮೀರಜ್ ಮತ್ತು ಮಾಲೆಗಾಂವ್‌ನಿಂದ ಬರುತ್ತದೆ. ಕೋಳಿ ಸಾಕಣೆದಾರರು ಎದುರಿಸುತ್ತಿರುವ ಆರ್ಥಿಕ ತೊಂದರೆಯಿಂದಾಗಿ ಸರಬರಾಜಿನಲ್ಲಿ ಶೇ.10ರಿಂದ 15ರಷ್ಟು ಕೊರತೆಯಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಹಾರಾಷ್ಟ್ರ ಪಾಲ್ಟ್ರಿ ಫಾರ್ಮರ್ಸ್ ಆ್ಯಂಡ್ ಬ್ರಿಡರ್ಸ್ ಅಸೋಸಿಯೇಶನ್ (ಪಿಎಫ್ ಮತ್ತು ಬಿಎ) ಅಧ್ಯಕ್ಷ ವಸಂತ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ನಾವು ಆರ್ಥಿಕ ಸಹಾಯಕ್ಕಾಗಿ ರಾಜ್ಯ ಸರಕಾರ ಮತ್ತು ಕೇಂದ್ರ ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆ ಸಚಿವಾಲಯಗಳನ್ನು ಸಂಪರ್ಕಿಸಿದ್ದೇವೆ ಎಂದವರು ತಿಳಿಸಿದ್ದಾರೆ. ರಾಜ್ಯವು ಪ್ರತಿದಿನ ಸುಮಾರು 2,200 ಟನ್ ಕೋಳಿ ಮಾಂಸವನ್ನು ಬಳಸುತ್ತದೆ. ಮುಂಬಯಿಯಲ್ಲಿ 1,000 ಟನ್ ಕೋಳಿ ಮಾಂಸ ಬಳಕೆಯಾಗುತ್ತದೆ. ಲಾಕ್‌ಡೌನ್ ಗೆ ಮುಂಚಿನ ಸ್ಥಿತಿಯ ತುಲನೆಯಲ್ಲಿ ಪ್ರಸ್ತುತ ವ್ಯವಹಾರವು ಶೇ. 50ರಷ್ಟಿದೆ. ಅ. 5ರಿಂದ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಮತ್ತೆ ತೆರೆದಾಗ ಪರಿಸ್ಥಿತಿ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದವರು ತಿಳಿಸಿದ್ದಾರೆ.
ತರಕಾರಿಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ಅಸಮಾಧಾನಗೊಂಡಿರುವ ಖರೀದಿದಾರರ ಜೇಬಿಗೆ ಕೋಳಿ ಮಾಂಸದ ಬೆಲೆ ಏರಿಕೆಯೂ ಇನ್ನಷ್ಟು ಕತ್ತರಿ ಹಾಕಲಿದೆ. ಕೋವಿಡ್ -19ನಿಂದ ಪ್ರತಿರಕ್ಷೆಗಾಗಿ ವಾರಕ್ಕೆ ಮೂರು ಬಾರಿ ಕೋಳಿ ಮತ್ತು ಮೊಟ್ಟೆಗಳನ್ನು ಖರೀದಿಸುತ್ತಿದ್ದೇನೆ. ಮಂಗಳವಾರ ಒಂದು ಕೆ.ಜಿ. ಕೋಳಿಗೆ 240 ರೂ. ಪಾವತಿಸಲು ಸಾಧ್ಯವಾಗಲಿಲ್ಲ.
-ಮಾರಿಯೋ ಗೇಬ್ರಿಯಲ್, ಕಲ್ಯಾಣ್ ನಿವಾಸಿ
ಯಾವುದೇ ಬೆಲೆ ಏರಿಕೆಯು ಕೆಲವು ವಾರಗಳವರೆಗೆ ಮಾತ್ರ ಇರುತ್ತದೆ. ಏಕೆಂದರೆ ಬಾಯ್ಲರ್ ಕೋಳಿಗಳು ಮಾರುಕಟ್ಟೆಗೆ ಬರುವ ಮೊದಲು ಬೆಳೆಯಲು ಅಷ್ಟು ಸಮಯ ಬೇಕಾಗುತ್ತದೆ.
-ಶಹನ್ವಾಜ್ ತನ್ವಾಲಾ, ಬಾಂಬೆ ಮಟನ್ ವಿತರಕರ ಸಂಘದ ಅಧ್ಯಕ್ಷರು
ಮಟನ್ ಬೆಲೆ ಈಗಾಗಲೇ ಪ್ರತಿ ಕೆ.ಜಿ.ಗೆ 640 ರೂ.ಗೆ ತಲುಪಿದೆ. ಇಂಥದರಲ್ಲಿ ಕೆ.ಜಿ.ಗೆ 160 ರೂ.ಗಳಷ್ಟಿದ್ದ ಕೋಳಿ ಬೆಲೆ ಕೈಗೆಟುಕುವಂತಿತ್ತು. ಆದರೆ ಈಗ ಅದು 220 ರೂ.ಗೆ ತಲುಪಿದ್ದು, ಇದು ನನಗೆ ಸರಿಹೊಂದುವಂಥದ್ದಲ್ಲ.
-ಅಶೋಕ್ ಜಾಧವ್, ನಿವೃತ್ತ ರೈಲ್ವೇ ಉದ್ಯೋಗಿ