ಚಿಕ್ಕಮಗಳೂರು: ಜಿಪಂ ಅಧ್ಯಕ್ಷರ ಅವಧಿ ಮುಗಿಯುವವರೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಬಿಜೆಪಿ ಪಕ್ಷವನ್ನೂ ತೊರೆಯುವುದಿಲ್ಲವೆಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕೋರ್ ಕಮಿಟಿತೀರ್ಮಾನದಂತೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜಿಲ್ಲಾಧ್ಯಕ್ಷರು ನನಗೆಸೂಚನೆ ನೀಡಿದ್ದರು. ನಾನು ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಂತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದರು.
ಜಿಪಂ ಅಧ್ಯಕ್ಷೆಯಾಗಿ 29 ತಿಂಗಳು ಕಳೆದಿದ್ದು, ಸದಸ್ಯರ ಸಹಕಾರ ಪಡೆದು ಪಕ್ಷಬೇಧ ಮರೆತು ಜಿಲ್ಲೆಯ ಅಭಿವೃದ್ಧಿಗೆಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ರಾಜೀನಾಮೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ನಾನೇನು ಪಕ್ಷದ ಸೂಚನೆಗೆ ವಿರುದ್ಧವಾಗಿ ನಡೆದುಕೊಂಡಿಲ್ಲ, ಪಕ್ಷದ ಒಪ್ಪಂದಗಳಿಗೆ ಬದ್ಧವಾಗಿದ್ದೇನೆಂದು ಹೇಳಿದರು. ಪೂರ್ಣಾವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ರಾಜ್ಯಾಧ್ಯಕ್ಷರು, ಸಚಿವರು, ಶಾಸಕರು, ಹಿರಿಯ ಮುಖಂಡರಲ್ಲಿ ಮನವಿ ಮಾಡಿದ್ದು, ಅವರ ಸಮ್ಮತಿಯಂತೆಯೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿದ್ದು ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶವಿಲ್ಲ. ರೂಪಿಸಿರುವ ಯೋಜನೆಗಳು, ಕಾಮಗಾರಿಗಳು ಅಪೂರ್ಣಗೊಂಡಿದ್ದು, ಅವುಗಳನ್ನು ಪೂರ್ಣಗೊಳಿಸಲು ಹಾಗೂ ಕ್ರಿಯಾ ಯೋಜನೆ ಅನುಮೋದನೆ ಪಡೆದು ಮಂಜೂರಾದ ಕಾಮಗಾರಿಗಳನ್ನು ಮುಗಿಸುವ ಉದ್ದೇಶದಿಂದ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಕೋರಿದ್ದೇನೆ. ಪಕ್ಷದ ವರಿಷ್ಠರ ಸಮ್ಮತಿ ಮೇರೆಗೆ ಮುಂದುವರಿಯುತ್ತಿರುವುದಾಗಿ ಹೇಳಿದರು.
ನಮ್ಮ ಸಮುದಾಯದ ಮುಖಂಡರು ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾತುಕತೆಗೆ ಮುಂದಾದಾಗ ಸರಿಯಾಗಿ ಸ್ಪಂದಿಸದೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದು, ಮನಸ್ಸಿಗೆ ನೋವುಂಟು ಮಾಡಿದೆ. ಸಮುದಾಯ ಮತ್ತು ಬಿಜೆಪಿ ಮುಖಂಡರು ಮಾತುಕತೆ ನಡೆಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಜಿಪಂ ಸಾಮಾನ್ಯ ಸಭೆ ಎರಡು ಬಾರಿ ಕರೆದಿದ್ದು ಸದಸ್ಯರು ಗೈರಾಗಿದ್ದರು. ಯಾವ ಕಾರಣಕ್ಕೆ ಗೈರಾಗಿದ್ದಾರೆಂದು ತಿಳಿದಿಲ್ಲ, ಸದಸ್ಯರು ಯಾವುದೇ ಪಕ್ಷದವರಾಗಲಿ ಪಕ್ಷದತೀರ್ಮಾನ , ಕಾರ್ಯಕ್ರಮಗಳನ್ನು ಆಡಳಿತದ ಮೇಲೆ ಹೇರಬಾರದು. ಇದರಿಂದ ಜಿಲ್ಲೆಯ ಮತದಾರರಿಗೆ ದ್ರೋಹ ಎಸಗಿದಂತೆ ಆಗುತ್ತದೆ. ಪಕ್ಷದ ವಿಚಾರಗಳನ್ನು ಆಡಳಿತದಲ್ಲಿ ತರಬಾರದೆಂದು ಮನವಿ ಮಾಡಿದರು.
ನ.18ಕ್ಕೆ ಮತ್ತೆ ಜಿಪಂ ಸಭೆ ಕರೆದಿದ್ದು ಸಭೆಯಲ್ಲಿ ಭಾಗವಹಿಸುವಂತೆ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಮೂರನೇ ಸಭೆಗೂ ಸದಸ್ಯರು ಗೈರಾದರೆ, ಮತ್ತೂಂದು ಸಭೆ ಕರೆಯುತ್ತೇನೆ. ಅದಕ್ಕೂ ಗೈರಾದರೆ ಮುಂದಿನ ವಿಚಾರ ಜಿಪಂ ಸಿಇಒ ಅವರಿಗೆ ಬಿಟ್ಟಿದ್ದಾಗಿರುತ್ತದೆ ಎಂದರು.