Advertisement

ಮೂಡಿಗೆರೆಯಲ್ಲಿ ಸಮಬಲದ ಹಣಾಹಣಿ?

01:21 PM Apr 29, 2019 | Team Udayavani |

ಚಿಕ್ಕಮಗಳೂರು: ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳನ್ನು ಒಳಗೊಂಡಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಳೆದ ಬಾರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಮತದಾನವಾಗಿದ್ದು, ಬಿಜೆಪಿ ಹಾಗೂ ಮೈತ್ರಿ ಪಕ್ಷದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

Advertisement

ಮೂಡಿಗೆರೆ ವಿಧಾನಸಭಾ ಕ್ಷೇತ್ರವು ಮೂಡಿಗೆರೆ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಬಳೆ, ಆಲ್ದೂರು ಮತ್ತು ಆವತಿ ಹೋಬಳಿಗಳನ್ನು ಒಳಗೊಂಡ ಕ್ಷೇತ್ರವಾಗಿದೆ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.72.27 ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಮತದಾನದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯುಂಟಾಗಿದ್ದು, ಶೇ.74.92 ರಷ್ಟು ಮತದಾನವಾಗಿದೆ. ಮತದಾನದಲ್ಲಿ ಏರಿಕೆಯುಂಟಾಗಿರುವ ಲಾಭ ಯಾವ ಅಭ್ಯರ್ಥಿಗೆ ಆಗಲಿದೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ಅಭ್ಯರ್ಥಿಗಿಂತ ಸುಮಾರು 17 ಸಾವಿರದಷ್ಟು ಮತಗಳನ್ನು ಹೆಚ್ಚಾಗಿ ಪಡೆದುಕೊಂಡಿದ್ದರು. ಆದರೆ ಈ ಬಾರಿ ಅಷ್ಟು ಪ್ರಮಾಣದ ಮುನ್ನಡೆ ಪಡೆಯುವುದು ಕಷ್ಟವೆಂದು ಹೇಳ ಲಾಗುತ್ತಿದೆಯಾದರೂ ಬಿಜೆಪಿ ಅಭ್ಯರ್ಥಿಯೇ ಮೈತ್ರಿ ಪಕ್ಷದ ಅಭ್ಯರ್ಥಿಗಿಂತ ಹೆಚ್ಚಿನ ಮತ ಪಡೆಯಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು ಇದ್ದಾರೆ. ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಸ್ಥಳೀಯರಾಗಿದ್ದಾರೆ. ತಾಲೂಕು ಪಂಚಾಯತ್‌ ಆಡಳಿತವೂ ಬಿಜೆಪಿ ಕೈಲಿದೆ. ಮೈತ್ರಿ ಪಕ್ಷಕ್ಕೆ ಮಾಜಿ ಸಚಿವರಾದ ಮೋಟಮ್ಮ ಹಾಗೂ ಬಿ.ಬಿ.ನಿಂಗಯ್ಯ ಶಕ್ತಿ ತುಂಬಿದ್ದರು.

ಜಿಲ್ಲಾದ್ಯಂತ ಇದ್ದ ರೀತಿಯಲ್ಲಿಯೇ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದಲ್ಲಿಯೇ ವಿರೋಧವಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹವಾ ಹೆಚ್ಚಾಗಿ ಇದ್ದುದರಿಂದಾಗಿ ಶೋಭಾ ವಿರುದ್ಧ ಇದ್ದ ಅಸಮಾಧಾನ ತೇಲಿ ಹೋಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

Advertisement

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ಮೈತ್ರಿ ಪಕ್ಷಗಳ ಮುಖಂಡರುಗಳ ನಡುವಿನ ವೈಮನಸ್ಸು ಮೈತ್ರಿ ಪಕ್ಷದ ಅಭ್ಯರ್ಥಿಗೆ ವ್ಯತಿರಿಕ್ತ ಪರಿಣಾಮವುಂಟು ಮಾಡಿದೆ ಎಂದು ಹೇಳಲಾಗುತ್ತಿದೆ. ಇದರೊಟ್ಟಿಗೆ ಕಾಂಗ್ರೆಸ್‌ ಪಕ್ಷದ ಚಿಹ್ನೆ ಇಲ್ಲದ ಪ್ರಪ್ರಥಮ ಚುನಾವಣೆ ಇದಾಗಿದ್ದರಿಂದಲೂ ಮೈತ್ರಿ ಪಕ್ಷಕ್ಕೆ ಸ್ವಲ್ಪ ಪೆಟ್ಟು ನೀಡಿರುವಂತೆ ಕಂಡು ಬರುತ್ತಿದೆ.

ಹಲವು ದಶಕಗಳ ಬೇಡಿಕೆ ಯಾಗಿದ್ದ ಕಳಸ ತಾಲೂಕು ಕೇಂದ್ರವಾಗಿಸುವ ಬೇಡಿಕೆಯು ಸಮ್ಮಿಶ್ರ ಸರ್ಕಾರದಿಂದಾಗಿ ಈಡೇರಿರುವುದು ಮೈತ್ರಿ ಪಕ್ಷಕ್ಕೆ ಸ್ವಲ್ಪ ಲಾಭ ಮಾಡಿಕೊಟ್ಟಿರುವಂತೆ ಕಂಡು ಬರುತ್ತಿದೆ.

ಇವೆಲ್ಲವುದರ ನಡುವೆಯೂ ಕಳೆದ ಲೋಕಸಭಾ ಚುನಾವಣೆಯಂತೆಯೇ ಈ ಬಾರಿಯೂ ಬಿಜೆಪಿಗೆ ಸ್ವಲ್ಪಮಟ್ಟಿನ ಮುನ್ನಡೆ ಮಾಡಿಕೊಡುವ ಸಾಧ್ಯತೆ ಕ್ಷೇತ್ರದಲ್ಲಿ ಕಂಡು ಬರುತ್ತಿದೆ.

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರ ಭಾ.ಜಾ.ಪ.ಕ್ಕೆ ಅತೀ ಹೆಚ್ಚು ಮತಗಳು ಬಂದಿವೆ. ಕಾರಣ ಬೂತ್‌ ಮಟ್ಟದಿಂದಲೂ ಭಾ.ಜ.ಪ ಕಾರ್ಯಕರ್ತರ ಶ್ರಮದಿಂದ ಅತೀ ಹೆಚ್ಚು ಮತ ಗಳಿಸುವಲ್ಲಿ ಯಶಸ್ವಿಯಾಗಲಿದೆ. ದೇಶದಲ್ಲಿ ಮತ್ತೂಮ್ಮೆ ಮೋದಿ ಸರ್ಕಾರ ಬರಬೇಕೆಂಬ ದೃಢಸಂಕಲ್ಪದಿಂದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅಲ್ಲದೆ ಹಾಲಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅತೀ ಹೆಚ್ಚು ಅನುದಾನಗಳನ್ನು ತಂದಿದ್ದಾರೆ. ಈ ಬಾರಿಯ ಚುನಾವಣೆ ಮೋದಿ ಮತ್ತು ದೇಶ ಎನ್ನುವ ಮಂತ್ರದೊಂದಿಗೆ ಚುನಾವಣೆ ನಡೆದಿದೆ.
•ದುಂಡುಗ ಪ್ರಮೋದ್‌,
ಭಾ.ಜಾ.ಪ ಮಂಡಲಾಧ್ಯಕ್ಷ

ಈ ಬಾರಿ ಕಾಂಗ್ರೆಸ್‌, ಜೆ.ಡಿ.ಎಸ್‌, ಕಮ್ಯುನಿಸ್ಟ್‌ ಪಕ್ಷ ಒಟ್ಟಾಗಿ ಲೋಕಸಭಾಚುನಾವಣೆ ಎದುರಿಸಿದೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಸ್ಪರ್ಧಿಸಿದ್ದು ಈ ಮೂರು ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗಾಗಿ ತಾಲೂಕಿನಾದ್ಯಂತ ಕೆಲಸ ಮಾಡಿದ್ದಾರೆ. ಮೈತ್ರಿ ಸರ್ಕಾರದ ಸಾಧನೆಗಳು ಶ್ರೀರಕ್ಷೆಯಾಗಿದೆ. ಆದ್ದರಿಂದ ಮೈತ್ರಿ ಅಭ್ಯರ್ಥಿಯ ಗೆಲುವು ಖಚಿತ.
ಎಚ್. ಜಿ.ಸುರೇಂದ್ರ,
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಮೈತ್ರಿ ಪಕ್ಷವಾದ ಕಾಂಗ್ರೆಸ್‌-ಜೆ.ಡಿ.ಎಸ್‌ ನ ಮೈತ್ರಿ ಅಭ್ಯರ್ಥಿ ಈ ಬಾರಿ ಗೆಲುವು ಸಾಧಿಸಲಿದ್ದಾರೆ. ವಿಧಾನಸಭಾ ಕ್ಷೇತ್ರದ ಒಂಬತ್ತು ಹೋಬಳಿಗಳಲ್ಲಿ ಐದು ಹೋಬಳಿಗಳಲ್ಲಿ ಜೆ.ಡಿ.ಎಸ್‌ ಮುನ್ನಡೆ ಸಾಧಿಸಲಿದೆ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿಯವರು ಕಳಸವನ್ನು ತಾಲೂಕಾಗಿ ಘೋಷಿಸಿರುವುದು ಹಾಗೂ ರೈತರ ಸಾಲ ಮನ್ನಾ ಮಾಡಿರುವುದು ಕಸ್ತೂರಿರಂಗನ್‌ ವರದಿ ಮರುಪರಿಶೀಲಿಸಲು ಒತ್ತಡ ಹೇರುತ್ತಿರುವುದು ಹಾಗೂ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿರುವುದರಿಂದ ಈ ಭಾಗದಲ್ಲಿ ಅತೀ ಹೆಚ್ಚು ಮತಗಳು ಬಿದ್ದಿವೆ. ಅದೇ ರೀತಿ ಕಾಂಗ್ರೆಸ್‌ ಜೆ.ಡಿ.ಎಸ್‌ ಮೈತ್ರಿಧರ್ಮವನ್ನು ಪಾಲಿಸಿ ಕಾರ್ಯಕರ್ತರು ಮತ್ತು ನಾಯಕರು ಒಮ್ಮತದಿಂದ ಕೆಲಸ ಮಾಡಿರುವುದು ಸಹ ಗೆಲುವಿಗೆ ಸಾಧ್ಯವಾಗುತ್ತಿದೆ.
ಡಿ.ಜಿ.ಸುರೇಶ್‌,
ಜೆ.ಡಿ.ಎಸ್‌ ಕ್ಷೇತ್ರ ಸಮಿತಿ ಅಧ್ಯಕ್ಷ

ಎಸ್‌.ಕೆ.ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next