ಚಿಕ್ಕಮಗಳೂರು: ಜಿಪಂ ಅಧ್ಯಕ್ಷ ಸ್ಥಾನ ದಲಿತ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಒತ್ತಾಯಪೂರ್ವಕವಾಗಿ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ಅಂಶುಮಂತ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಆಂತರಿಕ ಕಚ್ಚಾಟದಿಂದ ಸಾಂವಿಧಾನಿಕ ಸಂಸ್ಥೆ ಆಡಳಿತ ನಿಷ್ಕ್ರಿಯವಾಗಿದೆ. ಜಿಲ್ಲೆಯ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ಜಿಪಂ ಕಚೇರಿ ಬಿಜೆಪಿ ಕಚೇರಿಯಂತಾಗಿದೆ. ಜಿಪಂ ಅಧ್ಯಕ್ಷೆ ರಾಜೀನಾಮೆ ವಿಚಾರಕ್ಕೆ ಸಭೆ ಪದೇ ಪದೇ ಮುಂದೂಡಲಾಗುತ್ತಿದ್ದು, ವಿಕೇಂದ್ರೀಕರಣ ವ್ಯವಸ್ಥೆಯ ಆಶಯ ಬುಡಮೇಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧ್ಯಕ್ಷರ ರಾಜೀನಾಮೆ ವಿಚಾರ ಪಕ್ಷದ ಒಳಗೆ ಇತ್ಯಾರ್ಥಪಡಿಸಿಕೊಳ್ಳುವುದು ಬಿಟ್ಟು, ಸಾರ್ವಜನಿಕರ ಸಮಸ್ಯೆಗಳ ಚರ್ಚೆಗೆ ಮೀಸಲಾದ ಜಿಪಂ ಸಾಮಾನ್ಯ ಸಭೆಯನ್ನು ಬಲಿ ಕೊಡುತ್ತಿದ್ದಾರೆ. ಸದಸ್ಯರ ಗೈರು ಹಾಜರಿಯಿಂದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯದೆ ಕೋರಂ ಕೊರತೆಯಿಂದ 2 ಬಾರಿ ಸಭೆ ಮುಂದೂಡಲಾಗಿದೆ. ಜಿಲ್ಲೆಯ ಜನತೆಯ ಸಮಸ್ಯೆ, ಪರಿಹಾರ ಸಾಧ್ಯವಾಗುತ್ತಿಲ್ಲ ಎಂದರು.
ಬಿಜೆಪಿ ಮಹಿಳೆಯರ ಪರ ದಲಿತರ ಪರ ಎಂದು ಭಾಷಣ ಬಿಗಿಯುತ್ತಾರೆ. ಆದರೆ, ಜಿಪಂ ಅಧ್ಯಕ್ಷೆ ದಲಿತ ಸಮುದಾಯದ ಮಹಿಳೆಯಾಗಿದ್ದು, ಅಧ್ಯಕ್ಷ ಸ್ಥಾನ ಈ ಸಮುದಾಯದ ಮಹಿಳೆಗೆ ಮೀಸಲಾಗಿದೆ. ಆದರೆ ಬಿಜೆಪಿ ಮುಖಂಡರು ಜಿಪಂ ಅಧ್ಯಕ್ಷೆ ಅದಿಕಾರಾವಧಿ ಪೂರ್ಣವಾಗುವ ಮುನ್ನ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಜಿಪಂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಪರಿಣಾಮ ಜಿಪಂ ಆಡಳಿತ ನಿಷ್ಕ್ರಿಯವಾಗುವಂತಾಗಿದೆ ಎಂದು ದೂರಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿ, ಜಿಲ್ಲಾ ಬಿಜೆಪಿ ಮುಖಂಡರ ಚಿತಾವಣೆಯಿಂದಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಧಿನಿಯಮ ಗಾಳಿಗೆ ತೂರಿ ಜಿಪಂ ಅಧ್ಯಕ್ಷೆ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಜಿಪಂ ಅಧಿಕಾರಕ್ಕಾಗಿ ಕಲಾಪಕ್ಕೆ ಬಹಿಷ್ಕಾರ ಹಾಕಿ ಜನರ ಸಮಸ್ಯೆಗಳು ಚರ್ಚೆಯಾಗದಂತೆ ಮಾಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎನ್. ಮಹೇಶ್ ಮಾತನಾಡಿ, ಬಿಜೆಪಿ ಸಚಿವರು, ಶಾಸಕರು ಜಿಪಂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ಯಾವುದೇ ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳು ಜಿಪಂ ಸಭೆಗಳಲ್ಲಿ ಚರ್ಚೆಯಾಗುತ್ತಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಪಿ. ಮಂಜೇಗೌಡ, ಶಿವಾನಂದಸ್ವಾಮಿ ಇದ್ದರು.