Advertisement

ಶಿಥಿಲ ಕಟ್ಟಡದಲ್ಲಿದೆ ಚಿಕ್ಕ ಜಾಜೂರು ಗ್ರಂಥಾಲಯ

07:58 PM Nov 01, 2019 | Naveen |

ಚಿಕ್ಕಜಾಜೂರು: ಮೂಲ ಸೌಲಭ್ಯ ಹಾಗೂ ಸೂಕ್ತ ಕಟ್ಟಡ ಕೊರತೆ ಮಧ್ಯೆಯೇ ಇಲ್ಲಿನ ಗ್ರಂಥಾಲಯ ಕಳೆದ 30 ವರ್ಷಗಳಿಂದ ಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿದೆ.

Advertisement

1988ರಲ್ಲಿ ಆರಂಭಗೊಂಡ ಸಾರ್ವಜನಿಕ ಗ್ರಂಥಾಲಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಆರಂಭದಲ್ಲಿ ಗ್ರಾಮದ ಸಹಕಾರ ಸಂಘದ ಮಳಿಗೆಯಲ್ಲಿ ಗ್ರಂಥಾಲಯ ಆರಂಭಿಸಲಾಯಿತು.

ಎರಡು ವರ್ಷಗಳ ನಂತರ 1990ರಲ್ಲಿ ಹಳೇ ಗ್ರಾಪಂ ಕಚೇರಿ ಹಿಂಭಾಗ ಒಂದು ಸಣ್ಣ ಕೊಠಡಿಗೆ ಸ್ಥಳಾಂತರಿಸಲಾಯಿತು. 6 ವರ್ಷಗಳ ನಂತರ 1996-97ರಲ್ಲಿ ಸರ್ಕಲ್‌ ಶಾಲೆ ಪಕ್ಕದ ಒಂದು ಶಿಥಿಲ ಕಟ್ಟಡದಲ್ಲಿ ಗ್ರಂಥಾಲಯ ಆರಂಭಿಸಲಾಯಿತು.

2004-05ರಲ್ಲಿ ಗ್ರಾಪಂ ಸದಸ್ಯರೊಬ್ಬರು ಗ್ರಾಪಂ ಆವರಣದಲ್ಲಿ ನಿರ್ಮಿಸಿದ್ದ 20*15 ಅಳತೆಯ ಒಂದು ಚಿಕ್ಕ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಗೊಂಡಿತು. ಅಂದಿನಿಂದ ಅದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಈ ಕಟ್ಟಡ ನಿರ್ಮಿಸಿ ಹಲವಾರು ವರ್ಷಗಳಾಗಿವೆ. ಒಮ್ಮೆ ಅಷ್ಟೇ ಸುಣ್ಣ ಬಣ್ಣ ಬಳಿಯಲಾಗಿದೆ.ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ.

Advertisement

ವಾಚನಾಸಕ್ತರ ಸಂಖ್ಯೆ ಇಳಿಮುಖ: ಗ್ರಂಥಾಲಯಕ್ಕೆ ಸೂಕ್ತ ಕಟ್ಟಡ ಇಲ್ಲದಿರುವುದರಿಂದ ಜ್ಞಾನ ದೇಗುಲದ ಪುಸ್ತಕಗಳು ಧೂಳು ಹಿಡಿಯುತ್ತಿವೆ. ಕೇಂದ್ರ ಸರ್ಕಾದಿಂದ ಗಾಂ ಧಿ ಗ್ರಾಮ ಪ್ರಶಸ್ತಿ ಪಡೆದು “ಎ’ ಗ್ರೇಡ್‌ ಪಂಚಾಯತ್‌ ಎಂಬ ಹೆಗ್ಗಳಿಕೆ ಹೊಂದಿರುವ ಚಿಕ್ಕಜಾಜೂರು ಸುಮಾರು 5-6 ಸಾವಿರ ಜನಸಂಖ್ಯೆ ಇರುವ ಗ್ರಾಮ. ಸರ್ಕಾರಿ, ಖಾಸಗಿ, ಶಾಲಾ-ಕಾಲೇಜುಗಳಿವೆ. ಆದರೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ವಾಚನಾಲಯಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ.

ಆರಂಭದಲ್ಲಿ ಸಾಕಷ್ಟು ಪುಸ್ತಕ, ಪತ್ರಿಕೆಗಳು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ ಕಡಿಮೆಯಾಗಿದೆ.
ಪುಸ್ತಕ, ಪತ್ರಿಕೆಗಳ ಖರೀದಿಗೆ ಕೇವಲ 400 ರೂ. ಬರುತ್ತಿದೆ. ಗ್ರಂಥಾಲಯದೊಳಗೆ 8 ರಿಂದ 9 ಜನರು ಮಾತ್ರ ಓದಲು ಅವಕಾಶವಿದೆ. 15 ಕುರ್ಚಿಗಳಿದ್ದರೂ 6 ಕುರ್ಚಿಗಳು ಬಳಕೆಗೆ ಯೋಗ್ಯವಾಗಿಲ್ಲ. ಪುಸ್ತಕ ಜೋಡಿಸಲು 4 ಕಬ್ಬಿಣದ ಕಪಾಟುಗಳು, ಒಂದು ಟೇಬಲ್‌ ಹೊರತು ಪಡಿಸಿ ಬೇರಾವ ಸೌಲಭ್ಯವೂ ಇಲ್ಲ.

ಅಸಮರ್ಪಕ ನಿರ್ವಹಣೆಯಿಂದ ಪುಸ್ತಕಗಳು ಧೂಳು ಹಿಡಿಯುತ್ತಿವೆ. ಗ್ರಂಥಾಲಯ ಸುತ್ತ ಗಿಡ ಗಂಟಿಗಳು ಬೆಳೆದು ನಿಂತಿವೆ. ಛಾವಣಿಗೆ ಅಳವಡಿಸಿರುವ ಸಿಮೆಂಟ್‌ ಶೀಟ್‌ಗಳು ಸಂಪೂರ್ಣ ಹಾಳಾಗಿವೆ.

ಸಂಜೆಯಾದರೆ ಸೊಳ್ಳೆ, ಕ್ರಿಮಿ ಕೀಟಗಳ ಹಾವಳಿ ಶುರುವಾಗುತ್ತದೆ. ಗ್ರಂಥಾಲಯದ ಸಮೀಪದಲ್ಲೇ ಮಲ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಓದುಗರಿಗೆ ಕಿರಿಕಿರಿಯಾಗುತ್ತಿದೆ.

ಇ-ಗ್ರಂಥಾಲಯವನ್ನಾಗಿ ಮಾರ್ಪಡಿಸಿ: ಸುಮಾರು 8 ರಿಂದ 10 ಸಾವಿರದಷ್ಟಿದ್ದ ಪುಸ್ತಕಗಳ ಸಂಖ್ಯೆ ಈಗ 4300ಕ್ಕೆ ಇಳಿದಿದೆ. ವರ್ಷಕ್ಕೆ 100 ರಿಂದ 150 ಪುಸ್ತಕಗಳಷ್ಟೇ ಹೊಸದಾಗಿ ಸೇರ್ಪಡೆಯಾಗುತ್ತವೆ.

600-700 ಸದಸ್ಯರಿದ್ದ ಗ್ರಂಥಾಲಯದಲ್ಲಿ ಈಗ ಕೇವಲ 185 ಸದಸ್ಯರಿದ್ದಾರೆ. ಯುವ ಓದುಗರನ್ನು ಡಿಜಿಟಲ್‌ ಗ್ರಂಥಾಲಯ ಸೆಳೆಯುತ್ತಿರುವ ಕಾಲವಿದು. ಅಂಥದ್ದರಲ್ಲಿ ಸೌಕರ್ಯ ಕೊರತೆ ಇರುವ ಗ್ರಂಥಾಲಯಕ್ಕೆ ಯಾರೂ ಬರಲ್ಲ. ಹಾಗಾಗಿ ವಾಚನಾಸಕ್ತರ ಗಮನ ಸೆಳೆಯಲು ಡಿಜಿಟಲ್‌ ಹಾಗೂ ಇ-ಗ್ರಂಥಾಲಯ ಸೌಲಭ್ಯ ಕಲ್ಪಿಸಬೇಕು. ಸುಸಜ್ಜಿತ ಕಟ್ಟಡ ನಿರ್ಮಿಸಿ ಪುಸ್ತಕ ಪ್ರಿಯರನ್ನು ಗ್ರಂಥಾಲಯಗಳ ಕಡೆ ಬರುವಂತೆ ಆಕರ್ಷಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next