Advertisement

Tourist spots: ಸಾಲು ಸಾಲು ರಜೆ; ಪ್ರವಾಸಿ ತಾಣಗಳು ಭರ್ತಿ

10:34 AM Oct 25, 2023 | Team Udayavani |

ಚಿಕ್ಕಬಳ್ಳಾಪುರ: ದಸರಾ ಹಬ್ಬದ ಹಿನ್ನಲೆಯಲ್ಲಿ ಸಿಕ್ಕ ಸಾಲು ಸಾಲು ರಜೆಗಳನ್ನು ಬಳಸಿಕೊಂಡು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಹಾಕಿದ್ದು, ಕೇವಲ 3 ದಿನದಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ವೀಕ್ಷಣೆಗೆ ಭೇಟಿ ನೀಡಿದ್ದಾರೆ.

Advertisement

ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಕೇವಲ 3 ದಿನದಲ್ಲಿ 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಭೇಟಿ ನೀಡಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದಿದ್ದು, ಸೆಲ್ಫಿ ಸ್ಪಾಟ್‌ ಅವಲಬೆಟ್ಟ, ಶ್ರೀನಿವಾಸ ಸಾಗರ, ನಂದಿ ದೇಗುಲ. ರಂಗಸ್ಥಳಕ್ಕೆ, ಈಶಾ ಕೇಂದ್ರಕ್ಕೆ ಪ್ರವಾಸಿಗರ ಭೇಟಿ ಮುಂದುವರೆದಿದೆ.

ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಾರದ ಕಾಲ ದಸರಾ ರಜೆಗಳನ್ನು ಘೊಷಿಸಿರುವುದು ಒಂದಡೆಯಾ ದರೆ ಶನಿವಾರ, ಭಾನುವಾರದ ಜೊತೆಗೆ ಸೋಮವಾರ ಹಾಗೂ ಮಂಗಳವಾರ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಣೆ ಹಿನ್ನಲೆಯಲ್ಲಿ ನಂದಿಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ಭೇಟಿ ನೀಡಿ ಮೋಜು, ಮಸ್ತಿಯಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ವಿಶೇಷವಾಗಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು, ಬೆಂಗಳೂ ರಿನ ಐಟಿ, ಬಿಟಿ ಉದ್ಯೋಗಿಗಳು, ಸರ್ಕಾರಿ ಅಧಿಕಾರಿ ಗಳು, ನೌಕರರು, ಖಾಸಗಿ ಉದ್ಯೋಗಿಗಳು, ಪರಿಸರ ಪ್ರಿಯರು ಗಿರಿಧಾಮಕ್ಕೆ ಆಗಮಿಸಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಕ್ಷಣಗಳನ್ನು ಬೆಳ್ಳಿ ಮೋಡಗಳ ಕಲರವದ ಮಧ್ಯೆ ಕಣ್ಣು ತುಂಬಿಸಿಕೊಂಡರು.

ಪ್ರವಾಸಿ ತಾಣಗಳು ಹೌಸ್‌ಫ‌ುಲ್‌: ದಸರಾ ರಜೆಗಳ ಹಿನ್ನಲೆಯಲ್ಲಿ ಕುಟುಂಬ ಸಮೇತ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ನಂದಿ ಬೋಗನಂದೀಶ್ವರ ದೇವಾಲಯ, ರಂಗಸ್ಥಳದ ಶ್ರೀ ರಂಗನಾಥ ಸ್ವಾಮೀ ದೇವಾಲಯ, ಗೌರಿಬಿದನೂರಿನ ವಿದುರಾಶ್ವತ್ಥ, ಚಿಂತಾಮಣಿಯ ಕೈಲಾಸಗಿರಿ, ಕೈವಾರ, ಮುರಗಮಲ್ಲ, ಬಾಗೇಪಲ್ಲಿ ಗಡಿದಂ ದೇವಾಲಯ ಹಾಗೂ ಸೆಲ್ಫಿ ಸ್ಪಾಟ್‌ ಅವಲಬೆಟ್ಟಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಿಶೇಷವಾಗಿ ಅವಲಬೆಟ್ಟಕ್ಕೆ ಯುವಕ, ಯುವತಿಯರ ಸಂಖ್ಯೆ ಅಧಿಕವಾಗಿದೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ವೀಕ್ಷಣೆಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಈಶಾ ಕೇಂದ್ರಕ್ಕೆ ಪ್ರವಾಸಿಗರ ದಂಡು: ಇನ್ನೂ ಜಾಗತಿಕವಾಗಿ ತಮ್ಮ ಯೋಗ, ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಜಗ್ಗಿ ವಾಸುದೇವ್‌ ಅವರು ಚಿಕ್ಕಬಳ್ಳಾಪುರದ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ಬಳಿ ಸ್ಥಾಪಿಸಿರುವ ಈಶಾ ಕೇಂದ್ರಕ್ಕೆ ದಸರಾ ರಜೆಗಳ ಹಿನ್ನಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿ ನೀಡುತ್ತಿದ್ದಾರೆ. ಸತತ ಮೂರು ದಿನಗಳಿಂದ ಈಶಾ ಕೇಂದ್ರಕ್ಕೂ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

Advertisement

ಜಿಲ್ಲೆಯ ನಂದಿಗಿರಿಧಾಮ, ಅವಲಬೆಟ್ಟ, ಶ್ರೀನಿವಾಸ ಸಾಗರ ವೀಕ್ಷಣೆಗೆ ಬರುವ ಪ್ರವಾಸಿಗರು ಈಶಾ ಕೇಂದ್ರಕ್ಕೂ ಬರುತ್ತಿದ್ದು, ಈಶಾ ಕೇಂದ್ರ ನೋಡಲು ಆಗಮಿಸುವ ಪ್ರವಾಸಿಗರು ನಂದಿಬೆಟ್ಟ, ನಂದಿ ದೇವಾಲಯಕ್ಕೆ ಬೇಟಿ ನೀಡಿ ದಸರಾ ರಜೆಗಳನ್ನು ಮೋಜು, ಮಸ್ತಿಯ ಮೂಲಕ ಕಳೆಯುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಪ್ರವಾಸಿ ತಾಣಗಳ ಬಳಿ ಕರೆ ತಂದು ಮಕ್ಕಳ ಆಟೋಟಗಳನ್ನು ನೋಡಿ ಖುಷಿಯಲ್ಲಿ ತೇಲಾಡುವ ದೃಶ್ಯಗಳು ಪ್ರವಾಸಿ ತಾಣಗಳ ಬಳಿ ಕಂಡು ಬರುತ್ತಿವೆ.

ಹೋಟೆಲ್‌, ಬಾರ್‌ ರೆಸ್ಟೋರೆಂಟ್‌ಗಳು ಫ‌ುಲ್‌: ದಸರಾ ರಜೆಗಳ ಭಾಗವಾಗಿ ಪ್ರವಾಸೋದ್ಯಮ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೆದ್ದಾರಿ ಅಕ್ಕಪಕ್ಕದ ಹೋಟೆಲ್‌ ಸೇರಿದಂತೆ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಭರ್ತಿ ಆಗಿದ್ದವು. ಪ್ರವಾಸಿಗರ ದಟ್ಟಣೆಯಿಂದ ಹೋಟೆಲ್‌ಗ‌ಳು ರಶ್‌ ಆಗಿದ್ದವು, ಬಾರ್‌, ಡಾಬಾಗಳಲ್ಲಿ ಜನದಟ್ಟಣೆ ಕುಂಡು ಬಂತು. ಇನ್ನೂ ನಗರದ ನಂದಿಗಿರಿಧಾಮದಲ್ಲಿ ಪ್ರವಾಸಿಗರು ನಿರೀಕ್ಷೆಗೂ ಮೀರಿ ಆಗಮಿಸಿದ್ದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆ ಕಂಡು ಬಂದು ಕೆಲಕಾಲ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಯಿತು. ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಕೂಡ ವ್ಯಾಪಾರ ವಹಿವಾಟು ಜೋರಾಗಿತ್ತು.

ಶನಿವಾರ ಮಧ್ಯಾಹ್ನದಿಂದಲೇ ನಂದಿಗಿರಿಧಾಮಕ್ಕೆ ಪ್ರವಾಸಿಗರು ಆಗಮಿಸಿದ್ದು, ಶನಿವಾರ ಭಾನುವಾರ ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ದಸರಾ ರಜೆಗಳ ಹಿನ್ನಲೆಯಲ್ಲಿ ಸತತ ಮೂರು ನಾಲ್ಕೂ ದಿನಗಳಿಂದ ನಂದಿಗಿರಿಧಾಮಕ್ಕೆ ಪ್ರವಾಸಿಗರು ನಿರೀಕ್ಷೆಗಿಂತ ಅಧಿಕ ಜನರು ಆಗಮಿಸಿದ್ದಾರೆ. ಕೇವಲ 3 ದಿನದಲ್ಲಿ 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. -ಜಿ.ಮಂಜುನಾಥ, ನಂದಿಗಿರಿಧಾಮ ವಿಶೇಷಾಧಿಕಾರಿ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next